ಸೇಂಟ್ ಜೋನ್ಸ್ (ಆ್ಯಂಟಿಗುವಾ): ವೈಯಕ್ತಿಕ ಕಾರಣಗಳಿಂದ ವಿಂಡೀಸ್ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕ್ರಿಸ್ಗೇಲ್ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಿಂದ (ಸಿಪಿಎಲ್) ಹೊರಗುಳಿಯಲಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೊನಲ್ಲಿ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರವರೆಗೂ ಈ ಟೂರ್ನಿ ನಡೆಯಲಿದೆ. ಪ್ರೇಕ್ಷಕರಿಲ್ಲದೆ, ಬಾಗಿಲು ಮುಚ್ಚಿದ ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಈ ಪಂದ್ಯಾಟಕ್ಕೆ ಸರ್ಕಾರದ ಅನುಮತಿಯೂ ದೊರೆತಿದೆ.
ಸೇಂಟ್ ಲೌಸಿಯಾ ಜೌಕ್ಸ್ ಫ್ರಾಂಚೈಸಿ ಪರ ಆಡಲಿರುವ ಗೇಲ್, ಕೌಟುಂಬಿಕ ಕಾರಣ ನೀಡಿ ಸಿಪಿಎಲ್ನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಲಾಕ್ಡೌನ್ನಿಂದಾಗಿ ನನ್ನ ಕುಟುಂಬವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಈಗಲಾದರೂ ಅವರೊಂದಿಗೆ ಸಂತೋಷದಿಂದ ಕಾಲ ಕಳೆಯಬೇಕೆನಿಸುತ್ತಿದೆ. ಅದಕ್ಕೆ ಈ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಜಮೈಕಾ ತಲ್ಲವ್ಹಾಸ್ ಎರಡು ಬಾರಿ ಚಾಂಪಿಯನ್ ಆದಾಗ ಕ್ರಿಸ್ ಆ ತಂಡದ ಸದಸ್ಯರಾಗಿದ್ದರು. ಅಲ್ಲದೆ, ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯೋಟ್ಸ್ ತಂಡದ ಪರವಾಗಿಯೂ ಅವರು ಬ್ಯಾಟ್ ಬೀಸಿದ್ದರು. ಸಿಪಿಎಲ್ನಲ್ಲಿ 2,344 ರನ್ ಗಳಿಸುವ ಮೂಲಕ ಸಾರ್ವಕಾಲಿಕ ರನ್-ಸ್ಕೋರರ್ ಆಗಿದ್ದಾರೆ.