ಶಾರ್ಜಾ: ಮೂರು ಬಾರಿಯ ಐಪಿಎಲ್ ಚಾಂಪಿಯನ್ ತನ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಇದೀಗ ತನ್ನ ಎರಡನೇ ಪಂದ್ಯದಲ್ಲಿ ಮತ್ತೊಂದು ಗೆಲುವು ಸಾಧಿಸಲು ಎದುರು ನೋಡುತ್ತಿದೆ.
ಸ್ಟಿವ್ ಸ್ಮಿತ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡುತ್ತಿದೆ. ಈಗಾಗಲೇ ಮುಂಬೈ ವಿರುದ್ಧ ಸಿಎಸ್ಕೆ ರೋಚಕ ಗೆಲುವು ಸಾಧಿಸಿರುವುದನ್ನು ಕಂಡಿರುವ ರಾಯಲ್ಸ್ ಈ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ರಣತಂತ್ರ ರೂಪಿಸಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಧೋನಿ ಬಳಗದ ಬಲ-ದೌರ್ಬಲ್ಯಗಳನ್ನು ಕಣ್ಣಾರೆ ನೋಡಿದ್ದು, ಇಂದು ಯಾವ ರೀತಿ ಪೈಪೋಟಿ ನೀಡಲಿದೆ ಕಾದು ನೋಡಬೇಕಿದೆ.
ಕುಟುಂಬದೊಂದಿಗೆ ಬಂದಿರುವ ಕಾರಣ ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ 6 ದಿನಗಳ ಕ್ವಾರಂಟೈನ್ನಲ್ಲಿದ್ದು, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಹಾಗಾಗಿ, ಸಂಜು ಸಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ತಂಡದಲ್ಲಿ ಸಾಮ್ಸನ್, ಸ್ಮಿತ್,ರಾಬಿನ್ ಉತ್ತಪ್ಪ ಹಾಗೂ ಮಿಲ್ಲರ್ ಮಾತ್ರ ಅನುಭವವುಳ್ಳ ಆಟಗಾರರಾಗಿದ್ದಾರೆ. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ವೊಹ್ರಾ ಅಂತಹ ಯುವ ಆಟಗಾರರು ತಂಡಕ್ಕೆ ಬಲವಾಗಿದ್ದಾರೆ. ಜೈಸ್ವಾಲ್ ಅಂಡರ್-19 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಜೊತೆಗೆ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲೂ ದ್ವಿಶತಕ ಸಿಡಿಸಿ ತಮ್ಮ ತಾಕತ್ತನ್ನು ಪ್ರದರ್ಶಿಸಿದ್ದರು. ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿದರೂ ಯಾವುದೇ ಆಶ್ಚರ್ಯ ಪಡಬೇಕಿಲ್ಲ.
ರಾಯಲ್ಸ್ ತಂಡದಲ್ಲಿ ಬ್ಯಾಟಿಂಗ್ ಹೋಲಿಸಿದ್ರೆ ಬೌಲಿಂಗ್ ಬಲಾಢ್ಯವಾಗಿದೆ. ಜೋಫ್ರಾ ಆರ್ಚರ್, ಉನಾಡ್ಕಟ್,ಆ್ಯಂಡ್ರ್ಯೂ ಟೈ, ಟಾಮ್ ಕರ್ರನ್ರಂತಹ ವೇಗಿಗಳನ್ನು ಟೂರ್ನಿಯಲ್ಲಿ ಯಶಸ್ವಿ ಸ್ಪಿನ್ ಬೌಲರ್ಗಳಲ್ಲಿ ಒಬ್ಬರಾಗಿರುವ ಕರ್ನಾಟಕ ಶ್ರೇಯಸ್ ಗೋಪಾಲ್ ಜತೆಗೆ ಮಾಯಾಂಕ್ ಮಾರ್ಕಂಡೇ ಅವರನ್ನು ರಾಯಲ್ಸ್ ಒಳಗೊಂಡಿದೆ. ಕಾರ್ತಿಕ್ ತ್ಯಾಗಿ, ಒಶೇನ್ ಥಾಮಸ್ರಂತಹ ಯುವ ಬೌಲರ್ಗಳನ್ನು ಹೊಂದಿರುವ ಈ ತಂಡದಿಂದ ಧೋನಿ ಬಳಗದ ವಿರುದ್ಧ ಕಠಿಣ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡ್ವೇನ್ ಬ್ರಾವೋ ವಾಪಸ್ ಆಗುವ ಸಾಧ್ಯತೆ ಇದೆ. ಆದರೆ, ಅವರ ಬದಲು ಯಾವ ಆಟಗಾರ ತಂಡದಿಂದ ಹೊರ ಬೀಳಲಿದ್ದಾರೆ ಎನ್ನುವುದೇ ಗೊಂದಲದ ವಿಷಯ. ಯಾಕೆಂದರೆ, ಕಳೆದ ಪಂದ್ಯದಲ್ಲಿ ವಾಟ್ಸನ್ ಹೊರೆತು ಪಡಿಸಿದರೆ ಉಳಿದ ಮೂವರು ವಿದೇಶಿ ಆಟಗಾರರು ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಾಟ್ಸನ್, ಪ್ಲೆಸಿಸ್ ತಂಡದ ಬ್ಯಾಟಿಂಗ್ ಬಲವಾಗಿರುವುದರಿಂದ ಎಂಗಿಡಿ ಅಥವಾ ಸ್ಯಾಮ್ ಕರ್ರನ್ ಬ್ರಾವೋಗೆ ದಾರಿ ಮಾಡಿ ಕೊಡಬೇಕಿದೆ.
ತಂಡಗಳ ಮುಖಾಮುಖಿ : ಎರಡು ತಂಡಗಳು ಐಪಿಎಲ್ನಲ್ಲಿ 21 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಚೆನ್ನೈ ತಂಡ 14 ಬಾರಿ ಗೆಲುವು ಪಡೆದಿದ್ರೆ, ಉಳಿದ 7ರಲ್ಲಿ ರಾಜಸ್ಥಾನ್ ತಂಡ ಗೆಲುವು ಸಾಧಿಸಿದೆ. ಮಂಗಳವಾರದ ಪಂದ್ಯದಲ್ಲಿ ಗೆಲುವು ಯಾರ ಪರವಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಸಂಭಾವ್ಯ ಚೆನ್ನೈ ಸೂಪರ್ ಕಿಂಗ್ಸ್ : ಎಂ ಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ಶೇನ್ ವ್ಯಾಟ್ಸನ್, ಡು ಪ್ಲೆಸಿಸ್,ಅಂಬಾಟಿ ರಾಯುಡು, ಮುರಳಿ ವಿಜಯ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಡ್ವೇನ್ ಬ್ರಾವೋ/ಸ್ಯಾಮ್ ಕರ್ರನ್,ದೀಪಕ್ ಚಹಾರ್, ಲುಂಗಿ ಎಂಗಿಡಿ.
ಸಂಭಾವ್ಯ ರಾಜಸ್ಥಾನ್ ರಾಯಲ್ಸ್: ಸ್ಟೀವ್ ಸ್ಮಿತ್ (ನಾಯಕ),ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಮನನ್ ವೊಹ್ರಾ, ಮಾಯಾಂಕ್ ಮಾರ್ಕಂಡೇ/ರಾಹುಲ್ ತೇವಾಟಿಯಾ,ಜಯದೇವ್ ಉನಾದ್ಕಟ್, ಟಾಮ್ ಕರ್ರನ್.