ಕಟಕ್(ಒಡಿಶಾ): ವೆಸ್ಟ್ ಇಂಡೀಸ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಜಯಿಸಿದ ಟೀಂ ಇಂಡಿಯಾ ಸರಣಿ ಗೆಲುವಿನ ಮೂಲಕ 2019ಕ್ಕೆ ವಿದಾಯ ಹೇಳಿದೆ. ಈ ಪಂದ್ಯದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಒಡಿಶಾದ ಕಟಕ್ನಲ್ಲಿ ಭಾನುಚವಾರ ನಡೆದಿದ್ದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ ನಾಯಕ ವಿರಾಟ್ ಕೊಹ್ಲಿ 85 ರನ್ ಗಳಿಸಿದ್ದರು. ಈ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ, ದಿಗ್ಗಜ ಆಲ್ರೌಂಡರ್ ಜಾಕ್ ಕಾಲೀಸ್ ಅವರನ್ನು ಹಿಂದಿಕ್ಕಿದರು. ಕಾಲೀಸ್ 328 ಪಂದ್ಯಗಳಲ್ಲಿ 11,579 ರನ್ ಬಾರಿಸಿ, ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರು. ಇದೀಗ ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕೊಹ್ಲಿ ಕಾಲೀಸ್ರನ್ನು ಹಿಂದಿಕ್ಕಿದ್ದು, ಒಟ್ಟಾರೆ 11,609 ರನ್ ಬಾರಿದ್ದಾರೆ. ಕೊಹ್ಲಿ ಕೇವಲ 242ನೇ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್ನ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಗ್ರಗಣ್ಯರಾಗಿದ್ದರೆ (18426 ರನ್), ನಂತರದ ಸ್ಥಾನದಲ್ಲಿ ಕುಮಾರ ಸಂಗಕ್ಕರ್, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ, ಮಹೇಲ ಜಯವರ್ದನೆ, ಇಂಜಮಾಮ್ ಉಲ್ ಹಕ್ ಇದ್ದು, ಬಳಿಕ 7ನೇ ಸ್ಥಾನವನ್ನು ವಿರಾಟ್ ಕೊಹ್ಲಿ ತಲುಪಿದ್ದಾರೆ.
ಇನ್ನು ಭಾನುವಾರದ ಪಂದ್ಯದಲ್ಲಿ 316 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡ 48.4 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತ್ತು. ಅಲ್ಲದೆ ಕೆರಿಬಿಯನ್ನರ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ಜಯಿಸಿದೆ. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ, ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರೆ, ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಶಾರ್ದುಲ್ ಠಾಕೂರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.