ಕೋಲ್ಕತ್ತಾ: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವುದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮುಂದಿನ ಅವಧಿಗೂ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿದರೆ ಒಳ್ಳೆಯದು. ಒಂದು ವೇಳೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಬಗ್ಗೆ ಕೇಳಿದ್ರೆ ಮಾತನಾಡುವೆ ಎಂದು ಕೊಹ್ಲಿ ಹೇಳಿದ್ದರು.
ಇದಾದ ಬಳಿಕ ಮಾತನಾಡಿದದ ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಅಂಶುಮನ್ ಗಾಯಕ್ವಾಡ್, ಕೋಚ್ ಆಯ್ಕೆ ವೇಳೆ ಕ್ಯಾಪ್ಟನ್ ಅಭಿಪ್ರಾಯಕ್ಕೆ ನಾವು ಮನ್ನಣೆ ನೀಡುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ತಮಗೆ ಯಾವ ಕೋಚ್ ಬೇಕು ಎಂದು ಹೇಳುವ ಸಂಪೂರ್ಣ ಹಕ್ಕಿದೆ. ಅವರು ತಮ್ಮ ಅಭಿಮತ ಹೊರಹಾಕಿದ್ದು, ಅದನ್ನು ತೆಗೆದುಕೊಳ್ಳುವುದು ಬಿಡುವುದು ಕ್ರಿಕೆಟ್ ಸಲಹಾ ಸಮಿತಿಗೆ ಬಿಟ್ಟಿರುವ ವಿಚಾರ ಎಂದು ಹೇಳಿದ್ದಾರೆ.
ಈ ಹಿಂದೆ ಸಿಎಸಿ ಸಮಿತಿಯಲ್ಲಿದ್ದ ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಸೇರಿ ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಅವರನ್ನು ಆಯ್ಕೆ ಮಾಡಿದ್ದರು. ಇದೀಗ ಸಮಿತಿಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಪಿಲ್ ದೇವ್, ಅಂಶುಮನ್ ಗಾಯಕ್ವಾಡ್ ಹಾಗೂ ಮಹಿಳಾ ತಂಡದ ಮಾಜಿ ಕ್ಯಾಪ್ಟನ್ ಶಾಂತಾ ರಂಗಸ್ವಾಮಿ ಇದ್ದಾರೆ.