ಮೆಲ್ಬೋರ್ನ್(ಆಸ್ಟ್ರೇಲಿಯಾ): ಟೆಸ್ಟ್ ಸರಣಿ ಮಧ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ ಮೇಲೆ 'ಬ್ರಿಕ್ ವಾಲ್' ಚೇತೇಶ್ವರ್ ಪೂಜಾರ ತಮ್ಮ ಟಾರ್ಗೆಟ್ ಆಗಿದ್ದರೆಂದು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ 2-1 ರಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಕೊಹ್ಲಿ ಪಿತೃತ್ವ ರಜೆ ಪಡೆದು ಕೊನೆಯ ಮೂರು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಕೊಹ್ಲಿ ಇರುವವರೆಗೆ ಅವರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಆಸೀಸ್ ಬೌಲರ್ಗಳು ನಂತರ ಚೇತೇಶ್ವರ್ ಪೂಜಾರ ವಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಈ ವಿಚಾರವನ್ನು ಸ್ವತಃ ಕಮ್ಮಿನ್ಸ್ ಬಹಿರಂಗಗೊಳಿಸಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾದ ಉಪನಾಯಕನಾಗಿದ್ದ ಕಮ್ಮಿನ್ಸ್, ಪೂಜಾರ ಬಂಡೆಯಂತೆ ನಿಂತು ಬ್ಯಾಟಿಂಗ್ ಮಾಡಿದ್ದು ಸರಣಿಯಲ್ಲಿ ನಿರ್ಣಾಯಕ ಅಂಶವಾಗಿತ್ತು ಎಂದು ಹೇಳಿದರು.
ಪೂಜಾರ ಇಟ್ಟಿಗೆ ಗೋಡೆ (ಬ್ರಿಕ್ ವಾಲ್)ಎಂಬುದು ನನ್ನ ಮೊದಲ ಆಲೋಚನೆಯಾಗಿತ್ತು. ಹಾಗಾಗಿ ಒಮ್ಮೆ ನಾವು ಅವರ ಆಟವನ್ನು ಅಂತ್ಯಗೊಳಿಸುವ ದಾರಿ ಕಂಡುಕೊಂಡರೆ, ಪಂದ್ಯದಲ್ಲಿ ಗೆಲುವು, ಸೋಲು ಅಥವಾ ಡ್ರಾ ಫಲಿತಾಂಶಗಳು ಸಾಧ್ಯವಾಗಬಹುದು ನಾನು ಭಾವಿಸಿದ್ದೆ. ಸರಣಿಗೂ ಮುನ್ನವೇ ಕೊಹ್ಲಿ ಕೊನೆಯ 3 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗುತ್ತಾರೆ ಎಂಬುದು ನಮಗೆ ತಿಳಿದಿದ್ದರಿಂದ, ನನಗೆ ಪೂಜಾರ ಅವರೇ ದೊಡ್ಡ ವಿಕೆಟ್ ಆಗಿದ್ದರು" ಎಂದು ವಿಶ್ವದ ನಂಬರ್ ಒನ್ ಬೌಲರ್ ತಿಳಿಸಿದ್ದಾರೆ.
ಕಳೆದು ಎರಡು ವರ್ಷಗಳಿಂದ ಪೂಜಾರ ಸರಣಿ ನಿರ್ಧರಿಸುವ ಪ್ರಮುಖ ಅಂಶವಾಗಿದ್ದಾರೆ. ಅವರು ಭಾರತ ತಂಡದ ಮಧ್ಯಮ ಕ್ರಮಾಂಕದ ಬಂಡೆಯಂತೆ ಮತ್ತು ಅವರ ವಿರುದ್ಧ ಆಡುವುದು ಸರಣಿ ಹೋರಾಟದಲ್ಲಿನ ಒಂದು ದೊಡ್ಡ ಭಾಗ ಎಂದು ನಾನು ಭಾವಿಸಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಮ್ಮಿನ್ಸ್ ಹೇಳಿದ್ದಾರೆ.
ಪೂಜಾರ ಸಿಡ್ನಿ ಪಂದ್ಯ ಡ್ರಾ ಆಗುವಲ್ಲಿ ಮತ್ತು ಬ್ರಿಸ್ಬೇನ್ ಪಂದ್ಯದಲ್ಲಿ ಭಾರತ ಗೆಲ್ಲುವಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದ್ದರು. ಹಾಗಾಗಿ ಅವರು ಸರಣಿಯಲ್ಲಿ ನಮ್ಮ ಬಹುದೊಡ್ಡ ಟಾರ್ಗೆಟ್ ಆಗಿದ್ದರು ಎಂದು ಆಸೀಸ್ ವೇಗಿ ಹೇಳಿದ್ದಾರೆ.
ಪೂಜಾರ ಮತ್ತು ಕಮ್ಮಿನ್ಸ್ ನಡುವಿನ ನಡುವಿನ ಹೋರಾಟವನ್ನು ಗಮನಿಸಿದರೆ, ಆಸೀಸ್ ವೇಗಿ ಮೇಲುಗೈ ಸಾಧಿಸಿದ್ದಾರೆ. ಪೂಜಾರ ಕಮ್ಮಿನ್ಸ್ ವಿರುದ್ಧ 928 ಎಸೆತಗಳನ್ನು ಎದುರಿಸಿದ್ದು, ಕೇವಲ 271 ರನ್ಗಳಿಸಿದ್ದಾರೆ. 8 ಇನ್ನಿಂಗ್ಸ್ಗಳಲ್ಲಿ ಪೂಜಾರರನ್ನು ಕಮ್ಮಿನ್ಸ್ 5 ಬಾರಿ ಔಟ್ ಮಾಡಿದ್ದಾರೆ.
ಇದನ್ನು ಓದಿ:2ನೇ ಟೆಸ್ಟ್ ಪಂದ್ಯಕ್ಕೆ ಆ್ಯಂಡರ್ಸನ್ಗೆ ವಿಶ್ರಾಂತಿ: ಸುಳಿವು ನೀಡಿದ ಕೋಚ್ ಸಿಲ್ವರ್ವುಡ್