ಮುಂಬೈ: ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುವ ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ದಾಖಲೆಯನ್ನು ಹಾಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮುರಿಯಲಿದ್ದಾರೆ ಎಂದು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ಲ್ಲಿ 49 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನು, ವಿರಾಟ್ ಕೊಹ್ಲಿ 248 ಏಕದಿನ ಪಂದ್ಯಗಳಿಂದ 43, 86 ಟೆಸ್ಟ್ಗಳಿಂದ 27 ಶತಕ ದಾಖಲಿಸುವ ಮೂಲಕ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕ ಗಳಿಸಿದ್ದಾರೆ. ಸಚಿನ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ ಇನ್ನು 30 ಶತಕಗಳ ಅವಶ್ಯಕತೆಯಿದೆ. ಬ್ರೆಟ್ ಲೀ ಪ್ರಕಾರ ಕೊಹ್ಲಿ ಇನ್ನು 7-8 ವರ್ಷಗಳ ಕಾಲ ಕ್ರಿಕೆಟ್ ಆಡಿದರೆ ಖಂಡಿತ ಸಚಿನ್ ದಾಖಲೆ ಮುರಿಯಲಿದ್ದಾರೆ ಎಂದಿದ್ದಾರೆ.
ಸಚಿನ್ ಶತಕಗಳ ಶತಕ ದಾಖಲೆಯನ್ನು ಮುರಿಯುವ ಎಲ್ಲಾ ಅರ್ಹತೆ ಕೊಹ್ಲಿ ಬಳಿಯಿದೆ. ಇದೆಲ್ಲವನ್ನು ಸಾಧ್ಯವಾಗಿಸುವ ಫಿಟ್ನೆಸ್ ಕೂಡ ಕೊಹ್ಲಿಯಲ್ಲಿದೆ. ಮುಂದಿನ 7-8 ವರ್ಷಗಳ ಕಾಲ ಕ್ರಿಕೆಟ್ ಆಡಿದರೆ ಈ ದಾಖಲೆ ನಿರ್ಮಿಸಲು ಸಾಧ್ಯವಾಗಲಿದೆ. ಆದರೆ ಈ ಪಯಣದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮಾನಸಿಕ ಶಕ್ತಿ ಅಗತ್ಯ. ಇದು ಕೊಹ್ಲಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.