ನವದೆಹಲಿ : ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವಾಗ ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತದೆ ಎಂದು ಬಿಸಿಸಿಐ ಮೂಲದಿಂದ ತಿಳಿದು ಬಂದಿದೆ. ಇದರ ಬಗ್ಗೆ ಐಪಿಎಲ್ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗುತ್ತೆ ಎನ್ನಲಾಗಿದೆ.
ಸದ್ಯಕ್ಕೆ ಐಪಿಎಲ್ ಪರಿಶೀಲನಾ ಸಭೆ ನಡೆಯುವ ದಿನಾಂಕ ನಿರ್ಧಾರವಾಗಿಲ್ಲ. ಇತರೆ ವಿಚಾರಗಳ ಬಗ್ಗೆಯೂ ಗಮನ ನೀಡುತ್ತಿದೆ. ಐಪಿಎಲ್ನ ಫ್ರಾಂಚೈಸಿಗಳು ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ. ನಾವು ಕ್ರಿಕೆಟ್ ಮತ್ತು ದೇಶದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಐಪಿಎಲ್ ಸುತ್ತವಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡ ನಂತರ ಸಭೆ ನಡೆಯಲಿದೆ ಎಂದು ಸುದ್ದಿ ಏಜನ್ಸಿಗೆ ಅಧಿಕಾರಿಯೊಬ್ಬರು(ಸುದ್ದಿ ಮೂಲ) ತಿಳಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿಗೆ ಸಂಬಂಧಿಸಿದಂತೆ ಘರ್ಷಣೆ ಉಂಟಾಗಿರುವ ಹಿನ್ನೆಲೆ ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವದ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದಕ್ಕೂ ಮೊದಲು ಸೋಮವಾರ ಕೇಂದ್ರ ಸರ್ಕಾರ ಟಿಕ್ಟಾಕ್, ಯುಸಿ ಬ್ರೌಸರ್ ಸೇರಿ ಒಟ್ಟು 59 ಚೀನಾ ಮೂಲಕದ ಮೊಬೈಲ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ.
ಭಾರತದ ಸುರಕ್ಷತೆ, ಭದ್ರತೆ, ರಕ್ಷಣಾ, ಸಾರ್ವಭೌಮತ್ವ ಮತ್ತು ಸಮಗ್ರತೆಗಾಗಿ ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದೆ ಎಂದು ಕಾನೂನು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.