ನವದೆಹಲಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಗೆ ವಿದಾಯದ ಪಂದ್ಯವನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಮುಂಬರುವ ಐಪಿಎಲ್ ಆವೃತ್ತಿಯ ವೇಳೆ ಬೋರ್ಡ್, ಧೋನಿ ಬಗ್ಗೆ ಮಾತನಾಡಲಿದೆ. ಅದಕ್ಕೆ ತಕ್ಕಂತ ಯೋಜನೆಯನ್ನು ರೂಪಿಸಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಲಿದ್ದಾರೆ.
ಇದೀಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಬಹುಶಃ ಐಪಿಎಲ್ ನಂತರ ನಾವು ಇದರ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಏಕೆಂದರೆ ಧೋನಿ ರಾಷ್ಟ್ರಕ್ಕಾಗಿ ಸಾಕಷ್ಟು ಮಾಡಿದ್ದಾರೆ ಮತ್ತು ಅವರು ಎಲ್ಲ ಗೌರವಕ್ಕೂ ಅರ್ಹರಾಗಿದ್ದಾರೆ. ನಾವು ಅವರಿಗಾಗಿ ವಿದಾಯ ಪಂದ್ಯವನ್ನು ಆಯೋಜನೆ ಮಾಡಬೇಕೆಂದು ಯೋಜಿಸಿದ್ದೆವು. ಆದರೆ, ಧೋನಿ ವಿಭಿನ್ನ, ಅವರು ಯಾರೂ ಯೋಚಿಸದ ರೀತಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ ಎಂದು ಆ ಅಧಿಕಾರಿ ಹೇಳಿದ್ದಾರೆ.
ಧೋನಿ ನಿವೃತ್ತಿಯಾದ ನಂತರ ಏನಾದರೂ ಮಾತನಾಡಿದ್ದೀರಾ ಎಂದು ಕೇಳಿದ್ದಕ್ಕೆ, ಇಲ್ಲ, ಆದರೆ ಖಂಡಿತವಾಗಿಯೂ ನಾವು ಐಪಿಎಲ್ ಸಮಯದಲ್ಲಿ ಅವರೊಂದಿಗೆ ಮಾತನಾಡುತ್ತೇವೆ. ಅವರು ಒಂದು ಪಂದ್ಯ ಅಥವಾ ಸರಣಿಯಲ್ಲಿ ಆಡಲಿದ್ದಾರೆ ಎಂಬುದರ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲಿದ್ದೇವೆ. ನಂತರ ಅವರು ಒಪ್ಪುತ್ತಾರೋ ಅಥವಾ ಇಲ್ಲವೋ , ನಾವು ಅವರನ್ನು ಗೌರವಿಸುವುದು ಮತ್ತು ಸನ್ಮಾನಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಇಂಡಿಯನ್ ಕ್ರಿಕೆಟರ್ ಮದನ್ಲಾಲ್ ಕೂಡ ಧೋನಿಗೆ ವಿದಾಯದ ಪಂದ್ಯ ಬೇಕೆ ಬೇಕು ಎಂದಿದ್ದಾರೆ.
ಧೋನಿಗಾಗಿ ಬಿಸಿಸಿಐ ವಿದಾಯದ ಪಂದ್ಯವನ್ನು ಆಯೋಜಿಸಿದರೆ ನಾನು ನಿಜವಾಗಿಯೂ ಸಂತೋಷಪಡುತ್ತೇನೆ. ಅವರು ಒಬ್ಬ ಲೆಜೆಂಡರಿ ಆಟಗಾರ ಮತ್ತು ನೀವು ಅವರನ್ನು ಈ ರೀತಿ ಹೋಗುವುದನ್ನು ಬಿಡುವುದಿಲ್ಲ. ಅವರ ಅಭಿಮಾನಿಗಳು ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಬಯಸುತ್ತಾರೆ" ಎಂದು ಮದನ್ ಲಾಲ್ ಹೇಳಿದ್ದಾರೆ.