ನವದೆಹಲಿ: ತನ್ನ ಪ್ರಾಯೋಜಕತ್ವದ ನೀತಿಯನ್ನು ಪರಿಶೀಲಿಸಲು ಬಿಸಿಸಿಐ ಮುಕ್ತವಾಗಿದೆ. ಆದರೆ ಪ್ರಸ್ತುತ ಐಪಿಎಲ್ ಶೀರ್ಷಿಕೆ ಪ್ರಾಯೋಜಕನಾಗಿರುವ ವಿವೋದೊಂದಿಗಿನ ಒಪ್ಪಂದ ಕೊನೆಗೊಳಿಸುವ ಯಾವುದೇ ಯೋಚನೆ ಇಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ನಡುವಿನ ಗಡಿ ಘರ್ಷಣೆಯ ಬಳಿಕ ಭಾರತದಲ್ಲಿ ಚೀನಾ ವಿರೋಧಿ ಭಾವನೆಗಳು ಹೆಚ್ಚಿವೆ. ನಾಲ್ಕು ದಶಕಗಳ ಭಾರತ - ಚೀನಾ ಗಡಿಯಲ್ಲಿ ನಡೆದ ಚಕಮಕಿಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ಆದರೆ, ಐಪಿಎಲ್ನಂತಹ ಭಾರತೀಯ ಕಾರ್ಯಕ್ರಮವನ್ನು ಪ್ರಾಯೋಜಿಸುವ ಚೀನಿ ಕಂಪನಿಗಳು ಭಾರತದ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತವೆ, ಇದು ಭಾರತದ ಆರ್ಥಿಕತೆಗೆ ಸಹಾಯ ಮಾಡುತ್ತದೆ ಎಂದು ಧುಮಾಲ್ ಪ್ರತಿಪಾದಿಸಿದ್ದಾರೆ.
ವಿವೋದಿಂದ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ಪ್ರಾಯೋಜಕತ್ವ ಸಿಗುತ್ತಿದ್ದು, ಐದು ವರ್ಷಗಳ ಒಪ್ಪಂದವು 2022ರಲ್ಲಿ ಕೊನೆಗೊಳ್ಳಲಿದೆ.