ಮುಂಬೈ: ಡೆಡ್ಲಿ ಕೊರೊನಾ ವೈರಸ್ ಈಗಾಗಲೇ ಎಲ್ಲ ವಲಯಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕ್ರೀಡಾ ವಲಯದ ಮಹತ್ವದ ಟೂರ್ನಿಗಳೆಲ್ಲಾ ಈಗಾಗಲೇ ಮುಂದೂಡಿಕೆಯಾಗಿವೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ಮಂಡಳಿ ಮುಂಬರುವ ಎಲ್ಲ ಸರಣಿ ತಡೆ ಹಿಡಿಯಲು ನಿರ್ಧರಿಸಿದೆ.
ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಪೇಟಿಎಂ ಇರಾನಿ ಕಪ್, ಮಹಿಳಾ ಏಕದಿನ ಕ್ರಿಕೆಟ್, ವಿಜಯ್ ಹಜಾರೆ,ಅಂಡರ್-19 ಮಹಿಳಾ ಟಿ20 ಕ್ರಿಕೆಟ್, ಸೂಪರ್ ಲೀಗ್ ತಡೆ ಹಿಡಿಯಲಾಗಿದ್ದು, ಮುಂದಿನ ಆದೇಶ ಹೊರಬೀಳುವವರೆಗೂ ಇವುಗಳನ್ನ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್, ದಕ್ಷಿಣ ಆಫ್ರಿಕಾ-ಭಾರತ ತಂಡಗಳ ನಡುವಿನ ಕ್ರಿಕೆಟ್ ಸರಣಿ ಮುಂದೂಡಿಕೆಯಾಗಿದ್ದು, ಸದ್ಯದ ಸ್ಥಿತಿಯಲ್ಲಿ ಯಾವುದೇ ರೀತಿಯ ಕ್ರಿಕೆಟ್ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ಬಿಸಿಸಿಸಿ ಹೇಳಿಕೆ ನೀಡಿದೆ.
ವಿದೇಶದಲ್ಲೂ ಕೊರೊನಾ ತೀವ್ರತೆ ಹೆಚ್ಚಿರುವ ಕಾರಣ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ಸರಣಿ, ಇಂಗ್ಲೆಂಡ್-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಮುಂದೂಡಿಕೆಯಾಗಿದ್ದು, ಮಹಾಮಾರಿ ಕೊರೊನಾ ಭೀತಿ ಕಡಿಮೆಯಾಗಿವವರೆಗೆ ಯಾವುದೇ ಕ್ರಿಕೆಟ್ ಟೂರ್ನಿ ನಡೆಸದಿರುವ ಕುರಿತು ಆಯಾ ಕ್ರಿಕೆಟ್ ಮಂಡಳಿಗಳು ನಿರ್ಧಾರ ಕೈಗೊಂಡಿವೆ.