ಮುಂಬೈ: ಭಾರತ ತಂಡ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಿದ್ದು, ಜೂನ್ 18 ರಿಂದ 22ರವರೆಗೆ ಸೌತಾಂಪ್ಟನ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಆದರೆ ಇದೇ ಸಮಯದಲ್ಲಿ ಏಷ್ಯಾಕಪ್ ಕೂಡ ನಡೆಯಲಿರುವುದರಿಂದ ಬಿಸಿಸಿಐ ಅನಿವಾರ್ಯವಾಗಿ ಎರಡನೇ ಹಂತದ ತಂಡವನ್ನು ಕಳುಹಿಸಬೇಕಿದೆ. ಏಷ್ಯಾಕಪ್ ಮಿಸ್ ಮಾಡಿಕೊಳ್ಳದಿರುವುದಕ್ಕೆ ಇದೊಂದೇ ಮಾರ್ಗ ಉಳಿದಿದೆ.
ಏಷ್ಯಾ ಕಪ್ ಜೂನ್ ತಿಂಗಳಲ್ಲಿ ಶ್ರೀಲಂಕಾದಲ್ಲಿಯೂ ಆಯೋಜನೆಯಾಗಲಿದೆ. ಈ ಎರಡೂ ಸ್ಪರ್ಧೆಗಳು ನಡೆಯುವುದರಿಂದ ಏಷ್ಯಾಕಪ್ಗೆ ಭಾರತ ತಂಡ ಭಾಗವಹಿಸುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಪ್ರಬಲ ಭಾರತ ತಂಡ ಭಾಗವಹಿಸದಿದ್ದರೆ ಟೂರ್ನಿ ಕಳೆಗುಂದಲಿದೆ ಹಾಗಾಗಿ ಟೂರ್ನಿಯನ್ನು ಮುಂದೂಡುವುದು ಸೂಕ್ತ ಎಂದು ಪಿಸಿಬಿ ಕೂಡ ಧ್ವನಿಯೆತ್ತಿತ್ತು. ಇದೀಗ ಬಿಸಿಸಿಐ ಎರಡೂ ಟೂರ್ನಿಗಳಲ್ಲೂ ಭಾಗವಹಿಸಲು ಉತ್ತಮ ಮಾರ್ಗ ಕಂಡುಕೊಂಡಿದೆ. ವರದಿಗಳ ಪ್ರಕಾರ, ಬಿಸಿಸಿಐ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ಗೆ ಎರಡನೇ ಹಂತದ ತಂಡವನ್ನ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭಾರತ ತಂಡ ಟೆಸ್ಟ್ ಚಾಂಪಿಯನ್ಶಿಪ್ ಮುಗಿದ ನಂತರ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿ ಉಳಿದುಕೊಳ್ಳಲಿದೆ. ಹಾಗಾಗಿ ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್ಗೆ ಟೆಸ್ಟ್ನಲ್ಲಿಲ್ಲದ ಕೆಲವು ಸ್ಟಾರ್ ಆಟಗಾರರ ಜೊತೆಗೆ ಕೆಲವು ಯುವ ಆಟಗಾರರನ್ನು ಒಂದುಗೂಡಿಸಿ ದ್ವಿತೀಯ ತಂಡವನ್ನು ಕಳುಹಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದು ಸಾಧ್ಯವಾದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್, ಬುಮ್ರಾ, ಶಮಿ ಮತ್ತು ರಿಷಭ್ ಪಂತ್ ಏಷ್ಯಾಕಪ್ ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಶಿಖರ್ ಧವನ್, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ನಟರಾಜನ್ , ಮನೀಶ್ ಪಾಂಡೆಯಂತಹ ಬೆಂಚ್ನಲ್ಲಿರುವ ಆಟಗಾರರು ಏಷ್ಯಾಕಪ್‌ನಲ್ಲಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.
ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, 'ಏಷ್ಯಾಕಪ್ʼನಲ್ಲಿ ಭಾಗವಹಿಸಲು ಬಿಸಿಸಿಐ ಎರಡನೇ ಹಂತದ ತಂಡವನ್ನ ಕಳುಹಿಸುತ್ತಿದೆ. ತಂಡದ ವೇಳಾಪಟ್ಟಿ ತುಂಬಾ ಕಾರ್ಯನಿರತವಾಗಿದೆ ಮತ್ತು ಅವರು ಇಂಗ್ಲೆಂಡ್‌ನಲ್ಲಿಯೇ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನ ಆಡಬೇಕಾಗಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಂತ್ರ, ಭಾರತ ತಂಡವು ಅಲ್ಲಿಯೇ ಉಳಿಯುತ್ತದೆ ಮತ್ತು ಈ ಸಮಯದಲ್ಲಿ ದ್ವಿತೀಯ ಹಂತದ ತಂಡವು ಶ್ರೀಲಂಕಾದಲ್ಲಿ ನಡೆಯುವ ಏಷ್ಯಾಕಪ್‌ನಲ್ಲಿ ಭಾಗವಹಿಸಬಹುದು.
ಇದನ್ನು ಓದಿ:ಧವನ್ಗಿಂತಲೂ ರಾಹುಲ್ ಟಿ20ಯಲ್ಲಿ ರೋಹಿತ್ಗೆ ಉತ್ತಮ ಜೋಡಿ: ವಿವಿಎಸ್ ಲಕ್ಷ್ಮಣ್