ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿ ಇಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಫೆಬ್ರವರಿ ತಿಂಗಳಲ್ಲಿ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಇಂದು ಆಯ್ಕೆಯಾಗಲಿದೆ.
ಹೊಸದಾಗಿ ಆಯ್ಕೆಯಾಗಿರುವ ಆಯ್ಕೆ ಸಮಿತಿ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾ ಪ್ರಕಟಗೊಳಿಸಲಿದ್ದು, ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನ ವಹಿಸಿಕೊಳ್ಳುವ ಮೂಲಕ ತಂಡಕ್ಕೆ ಮರಳಲಿದ್ದಾರೆ. ಜೂಮ್ ಕಾಲ್ ಮೂಲಕ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ ಶರ್ಮಾ,ಸುನೀಲ್ ಜೋಶಿ,ಹರೀವಿಂದರ್ ಸಿಂಗ್ ಇಂದು ತಂಡ ಆಯ್ಕೆ ಮಾಡಲಿದ್ದು, ಗಾಯಗೊಂಡಿದ್ದ ಇಶಾಂತ್ ಶರ್ಮಾ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ಪ್ಲೇಯರ್ಸ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಬೇರೆ ಪ್ಲೇಯರ್ಸ್ಗಳಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಓದಿ: ಸಿಂಹಳೀಯರಿಗೆ ತವರಿನಲ್ಲೇ ಮುಖಭಂಗ: ಇಂಗ್ಲೆಂಡ್ಗೆ 7 ವಿಕೆಟ್ಗಳ ಭರ್ಜರಿ ಜಯ
ಲಭ್ಯವಾಗಿರುವ ಮಾಹಿತಿ ಪ್ರಕಾರ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆಲ್ರೌಂಡರ್ ರವೀಂದ್ರ ಜಡೇಜಾ, ಹನುಮ ವಿಹಾರಿ ಆಯ್ಕೆಗೆ ಲಭ್ಯವಾಗಿಲ್ಲ. ಫೆಬ್ರವರಿ 5ರಿಂದ 9 ಹಾಗೂ 13-17ರವರೆಗೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಟೀಂ ಇಂಡಿಯಾ ಜನವರಿ 27ರಂದು ಬಯೋ ಬಬಲ್ ಪ್ರವೇಶಿಸಲಿದೆ. ಇಂಗ್ಲೆಂಡ್ ತಂಡ ಸದ್ಯ ಶ್ರೀಲಂಕಾ ನೆಲದಲ್ಲಿ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲು ಮಾಡಿದೆ.