ನವದೆಹಲಿ: ಶುಕ್ರವಾರದಿಂದ ಆರಂಭಗೊಂಡಿರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಶುಲ್ಕ ಮತ್ತು 6 ಕ್ರಿಕೆಟ್ ಆಸೋಸಿಯೇಷನ್ಗಳಿಗೆ ಪಂದ್ಯ ಆಯೋಜಿನೆಯ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ಪಂದ್ಯವನ್ನು ಆಯೋಜಿಸುವ ಕ್ರಿಕೆಟ್ ಆಸೋಸಿಯೇಷನ್ಗೆ ಪಂದ್ಯವೊಂದಕ್ಕೆ ₹2.5 ಲಕ್ಷವಿದ್ದ ಶುಲ್ಕವನ್ನು ₹3.5 ಲಕ್ಷಕ್ಕೆ ಹಾಗೂ ಆಟಗಾರರ ಪಂದ್ಯದ ಶುಲ್ಕವನ್ನು ₹50,000ದಿಂದ ₹75,000ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಕೋವಿಡ್-19ನಿಂದ ಸ್ಥಗಿತವಾಗಿದ್ದ ದೇಶಿ ಕ್ರಿಕೆಟ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮೂಲಕ ಭಾನುವಾರದಿಂದ ಪುನಾರಂಭ ಪಡೆದುಕೊಂಡಿದೆ. ಇಡೀ ಟೂರ್ನಿ 6 ರಾಜ್ಯ ಮಂಡಳಿಗಳ ಆಶ್ರಯದಲ್ಲಿ ನಡೆಯಲಿದೆ. ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ವಡೋದರಾ, ಇಂದೋರ್‌ನಲ್ಲಿ ಲೀಗ್ ಪಂದ್ಯಗಳು ಮತ್ತು ನಾಕೌಟ್ ಪಂದ್ಯಗಳು ಅಹ್ಮದಾಬಾದ್ ನೂತನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ.
ಅಹ್ಮದಾಬಾದ್ನಲ್ಲಿ ಕಳೆದ ತಿಂಗಳು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಪ್ರತಿಕ್ರಿಯೆ ಪಡೆದ ನಂತರ ನಾನು ಮತ್ತು ಬಿಸಿಸಿಐನ ಸಹೋದ್ಯೋಗಿಗಳು ಚರ್ಚಿಸಿ ಸಯ್ಯದ್ ಮುಷ್ತಾಕ್ ಅಲಿ ಪಂದ್ಯವಾಳಿಯಲ್ಲಿ ಆಟಗಾರರ ಪಂದ್ಯದ ಶುಲ್ಕ ಮತ್ತು ಪಂದ್ಯ ಆಯೋಜನೆಯ ಶುಲ್ಕವನ್ನು ಹೆಚ್ಚಿಸುತ್ತಿದ್ದೇವೆ ಎಂದು ಘೋಷಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಇದನ್ನು ಓದಿ:ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಜಮ್ಮು ಕಾಶ್ಮೀರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ