ಮುಂಬೈ : ಕೋವಿಡ್ 19 ಭೀತಿಯಿಂದ 3 ತಿಂಗಳು ಸ್ಥಗಿತಗೊಂಡಿದ್ದ ಕ್ರಿಕೆಟ್ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಮೂಲಕ ಮತ್ತೆ ಕ್ರಿಕೆಟ್ ಪುನಾರಂಭವಾಗುವಂತೆ ಮಾಡಿತ್ತು. ಇದರ ನಂತರ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ಕೂಡ ತರಬೇತಿ ಶಿಬಿರ ಆರಂಭಿಸಿವೆ.
ಇದೀಗ ಕೊರೊನಾ ಭೀತಿಯಿಂದ ಮನೆಯಲ್ಲಿ ಬೀಡುಬಿಟ್ಟಿರುವ ಭಾರತೀಯ ಆಟಗಾರರಿಗೆ ಬಿಸಿಸಿಐ ತರಬೇತಿ ಶಿಬಿರ ಏರ್ಪಡಿಸುವ ನಿರ್ದಾರ ಮಾಡಿದೆ. ಮೂಲಗಳ ಪ್ರಕಾರ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿರುವ ಆಟಗಾರರಿಗೆ ಯುಎಇನಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಏರ್ಪಡಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಮುಂಬೈನಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಸುಧಾರಿಸದಿದ್ದರೆ ಬಹುಶಃ ಐಪಿಎಲ್ ನಡೆಸಲು ಯುಎಇ ಬಿಸಿಸಿಐನ ಮೊದಲ ಆಯ್ಕೆಯಾಗಿದೆ. ಹೀಗಾಗಿ ರಾಷ್ಟ್ರೀಯ ಕ್ಯಾಂಪ್ ಕೂಡ ಅಲ್ಲೇ ನಡೆಯೋ ಸಾಧ್ಯತೆ ಹೆಚ್ಚಿದೆ. ಐಪಿಎಲ್ ತಾಣ ಘೋಷಿಸಲ್ಪಟ್ಟ ಬಳಿಕ ಐಪಿಎಲ್ ಬಗ್ಗೆ ಮುಂದುವರೆಯಲು ಸಾಧ್ಯವಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಯಾವುದೇ ಸರಣಿಯ ಆರಂಭಕ್ಕೂ ಮುನ್ನ 5 ರಿಂದ 6 ವಾರಗಳ ಫಿಟ್ನೆಸ್ ತರಬೇತಿ ಶಿಬಿರವನ್ನು ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಭಾರತದಲ್ಲಿ ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಭಾರತದಲ್ಲಿ ಐಪಿಎಲ್ ನಡೆಸುವುದು ಅಸಾಧ್ಯ ಎನ್ನಲಾಗಿದೆ. ಇನ್ನು, ಶ್ರೀಲಂಕಾ ಅಥವಾ ಯುಎಇ ಕ್ರಿಕೆಟ್ ಮಂಡಳಿಗಳು ಶ್ರೀಮಂತ ಲೀಗ್ ನಡೆಸಲು ಸಿದ್ಧವಿರುವುದರಿಂದ ಬಿಸಿಸಿಐ ವಿದೇಶದಲ್ಲಿ ಐಪಿಎಲ್ ಆಯೋಜಿಸುವುದು ಅನಿವಾರ್ಯವಾಗಿದೆ.