ದುಬೈ: ಕಳೆದ ಎರಡು ತಿಂಗಳಿಂದ ತೂಗುಯ್ಯಾಲೆಯಲ್ಲಿರುವ ಟಿ-20 ವಿಶ್ವಕಪ್ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ಐಸಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ನಿರೀಕ್ಷೆ ಮಾಡಿದೆ.
ಈ ವಿಶ್ವಮಟ್ಟದ ಟೂರ್ನಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಬೇಕಿದೆ. ಆದರೆ ವಿಕ್ಟೋರಿಯಾದಲ್ಲಿ ಕೋವಿಡ್-19 ಎರಡನೇ ಹಂತದಲ್ಲಿರುವುದರಿಂದ ತಮ್ಮಿಂದ ದೊಡ್ಡ ಟೂರ್ನಿಯನ್ನು ಆಯೋಜನೆ ಮಾಡಲಾಗುವುದಿಲ್ಲ ಎಂದು ಹೇಳಿಕೊಂಡಿದೆ.
ಇನ್ನು ಭಾರತದಲ್ಲೂ ಕೊರೊನಾ ವೈರಸ್ ಪ್ರಕರಣ 10 ಲಕ್ಷದ ಗಡಿದಾಟಿದೆ. ಆದ್ದರಿಂದ ಶ್ರೀಮಂತ ಕ್ರಿಕೆಟ್ ಲೀಗ್ ಯುಎಇಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಈಗಾಗಲೆ ಏಷ್ಯಾಕಪ್ ಮುಂದೂಡಲಾಗಿದೆ. ಇನ್ನು ಟಿ-20 ವಿಶ್ವಕಪ್ ಮುಂದೂಡುವ ಬಗ್ಗೆ ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಂಡ ಮೇಲೆ ನಾವು ನಮ್ಮ ಯೋಜನೆಯಂತೆ ನಡೆಯಲು ಸಾಧ್ಯವಾಗಲಿದೆ. ಮೆಗಾ ಇವೆಂಟ್ ಆಯೋಜಿಸಲು ತಾನು ಆಸಕ್ತಿ ಹೊಂದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದ ನಂತರವೂ ಐಸಿಸಿ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮುಂದಿನ ವಿಶ್ವಕಪ್ ಪಂದ್ಯಾವಳಿ ಆಸ್ಟ್ರೇಲಿಯಾದಲ್ಲಿ 2022ಕ್ಕೆ ನಡೆಯುವ ಸಾಧ್ಯತೆಯಿದೆ.