ನವದೆಹಲಿ : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೊಹ್ರಿ ನೀಡಿದ್ದ ರಾಜೀನಾಮೆಯನ್ನು ಇ-ಮೇಲ್ ಮೂಲಕ ಸ್ವೀಕರಿಸಿದೆ. ಈ ಮೊದಲೇ ಜೊಹ್ರಿ ರಾಜೀನಾಮೆ ನೀಡಿದ್ದರೂ ಸ್ವೀಕಾರಗೊಂಡಿರಲಿಲ್ಲ. ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಟೆಂಡರ್‌ನಲ್ಲಿ ಸೋರಿಕೆ ಸೇರಿದಂತೆ ಇತರ ಗಂಭೀರ ಆರೋಪಗಳು ಜೊಹ್ರಿ ಅವರ ಮೇಲಿತ್ತು.
ಈ ಕುರಿತು ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ರಾಜೀನಾಮೆ ಸ್ವೀಕಾರಗೊಂಡಿರುವ ಬಗ್ಗೆ ಇ-ಮೇಲ್ ಮೂಲಕ ಅವರಿಗೆ ತಿಳಿಸಲಾಗಿದೆ. ಈ ಮೊದಲೇ ರಾಜೀನಾಮೆ ನೀಡಿದ್ದರು. ಆದರೆ, ಅವರನ್ನು ಮುಂದುವರೆಯುವಂತೆ ತಿಳಿಸಲಾಗಿತ್ತು. ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಟೆಂಡರ್‌ನಲ್ಲಿ ಸೋರಿಕೆಯನ್ನು ಒಂದು ಹಗರಣವೆಂದು ಪರಿಗಣಿಸಲಾಗಿದೆ. ಹಣಕಾಸಿನ ವಿಷಯಗಳು ಗೌಪ್ಯವಾಗಿಡಲು ಸಾಧ್ಯವಾಗದಿದ್ದರೆ ಅದು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಅದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು, ಈ ಹಿಂದೆ ಜೊಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವೂ ಕೇಳಿ ಬಂದಿತ್ತು. ಲೇಖಕಿ ಹರ್ನಿಧ್ ಕೌರ್ ಜೊಹ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.
ಜೊಹ್ರಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯಕಾರಿಯೊಬ್ಬರು, ಲೈಂಗಿಕ ಕಿರುಕುಳದ ಆರೋಪದ ನಂತರ ಅವರು ಸ್ವಲ್ಪ ಹೆಚ್ಚೆ ವಿಶ್ವಾಸದಿಂದ ಇದ್ದರು. ಕಾರಣ ದೊಡ್ಡ ಆರೋಪ ಎದುರಿಸುತ್ತಿದ್ದರೂ ಅವರಿಗೆ ತನ್ನ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಾಯಿತು. ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಬಗ್ಗೆ ವಿಚಾರಣೆ ನಡೆದಿತ್ತು. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ವಿಚಾರಣೆಯ ವರದಿ ದೂರುದಾರರಿಗೂ ಲಭ್ಯವಾಗಿಲ್ಲ ಎಂದಿದ್ದಾರೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸಿಇಒ ಇರುವುದು ಮಹಿಳಾ ಕ್ರಿಕೆಟ್ಗೆ ಸೂಕ್ತವಲ್ಲ. ಬಿಸಿಸಿಐನಲ್ಲಿ ಕೆಲಸ ಮಾಡುವ ಮಹಿಳಾ ಕ್ರಿಕೆಟಿಗರು ನಿರಾಳರಾಗಿರಬೇಕು. ಜೊತೆಗೆ ಅವರು ಕ್ರಿಕೆಟ್ ಪುನರಾರಂಭಕ್ಕೂ ಸಮರ್ಥವಾದ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಿಒಎ ಮಾಜಿ ಸದಸ್ಯೆ ಡಯಾನಾ ಎಡುಲ್ಜಿ, ಕೊನೆಗೂ ನ್ಯಾಯ ಮೇಲುಗೈ ಸಾಧಿಸಿದೆ. ಮಹಿಳಾ ಕ್ರಿಕೆಟಿಗರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ ಎಂದಿದ್ದಾರೆ.