ಹೈದರಾಬಾದ್: ಭಾರತದಲ್ಲಿ ನಡೆಯುವ 2021ನೇ ಟಿ-20 ವಿಶ್ವಕಪ್ ಮತ್ತು 2023ರ ವಿಶ್ವಕಪ್ನಲ್ಲಿ ಭಾಗವಹಿಸಲು ನಮ್ಮ ತಂಡಕ್ಕೆ ವೀಸಾ ಪಡೆಯಲು ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಐಸಿಸಿ ಭರವಸೆ ನೀಡಬೇಕು ಎಂದು ಕೇಳಿದ್ದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಆಟದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಐಸಿಸಿ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ. ಕ್ರಿಕೆಟ್ ಮಂಡಳಿಗಳಿಗೂ ಇದು ಅನ್ವಯಿಸುತ್ತದೆ. ಭಾರತೀಯ ಮಂಡಳಿಯಿಂದ ವೀಸಾ ಸಂಬಂಧಿತ ಭರವಸೆ ಕೇಳುವ ಮೊದಲು ಗಡಿಯಲ್ಲಿ ಯಾವುದೇ ಹಗೆತನ ನಡೆಸುವುದಿಲ್ಲ ಎಂದು ಲಿಖಿತ ಭರವಸೆ ನೀಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಕೇಳಿದ್ದಾರೆ.
ಪಾಕಿಸ್ತಾನ ಕಡೆಯಿಂದ ಭಾರತಕ್ಕೆ ಯಾವುದೇ ಅಕ್ರಮ ಆಕ್ರಮಣಗಳು ನಡೆಯದಂತೆ ಪಾಕಿಸ್ತಾನ ಸರ್ಕಾರ ಖಚಿತಪಡಿಸುತ್ತದೆಯೇ? ಕದನ ವಿರಾಮ ಉಲ್ಲಂಘನೆಯಾಗುವುದಿಲ್ಲ ಅಥವಾ ಪಾಕಿಸ್ತಾನದಿಂದ ಭಾರತದ ನೆಲದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯಗಳು ನಡೆಯುವುದಿಲ್ಲ ಅಥವಾ ಪುಲ್ವಾಮಾ ಮಾದರಿಯ ಘಟನೆ ಪುನರಾವರ್ತನೆ ಆಗುವುದಿಲ್ಲ ಎಂದು ಪಿಸಿಬಿ ಲಿಖಿತವಾಗಿ ಭರವಸೆ ನೀಡುತ್ತದೆಯೇ ಎಂದು ಕೇಳಿದ್ದಾರೆ.
ಭಾರತದಲ್ಲಿ ವಿಶ್ವಕಪ್ ಆಡಲು ಅನುಮತಿ ನೀಡುವ ಬಗ್ಗೆ ಲಿಖಿತ ಭರವಸೆ ಕೇಳಿದ ಪಿಸಿಬಿ
ಆಟ ಅಥವಾ ಆಡಳಿತದಲ್ಲಿ ಸರ್ಕಾರಗಳ ಹಸ್ತಕ್ಷೇಪ ಇರಬಾರದು ಎಂದು ಐಸಿಸಿ ಆದೇಶಿಸುತ್ತದೆ. ಅದರಂತೆ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಕ್ರೀಡಾ ಮಂಡಳಿಯು ಹಸ್ತಕ್ಷೇಪ ಮಾಡಲು ಪ್ರಯತ್ನಿಸುವುದಿಲ್ಲ. ಪಿಸಿಬಿ ಅದನ್ನು ಅರಿತುಕೊಂಡು ಅದರಂತೆ ವರ್ತಿಸಬೇಕು ಎಂದಿದ್ದಾರೆ.
ಐಸಿಸಿಯ 2021ರ ಟಿ-20 ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಿದೆ. ಆದ್ದರಿಂದ ನಮ್ಮ ತಂಡಕ್ಕೆ ವೀಸಾ ಪಡೆಯಲು ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಐಸಿಸಿ ಭರವಸೆ ನೀಡಬೇಕು ಎಂದು ಯೂಟ್ಯೂಬ್ ಕ್ರಿಕೆಟ್ ಚಾನೆಲ್ ಕ್ರಿಕೆಟ್ ಬಾಝ್ ನಡೆಸಿದ ಸಂದರ್ಶನದಲ್ಲಿ ಪಿಸಿಬಿ ಸಿಇಒ ವಾಸಿಂ ಖಾನ್ ಹೇಳಿದ್ದರು.