ರೋಮ್: ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ರೋಮ್ ರ‍್ಯಾಂಕಿಂಗ್ ಸಿರೀಸ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬಜರಂಗ್ ರೋಮ್ ರ‍್ಯಾಂಕಿಂಗ್ ಸಿರೀಸ್‌ನ 65 ಕೆಜಿ ಫ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಜೋರ್ಡಾನ್ ಮೈಕಲ್ ಅವರನ್ನು 4-3 ರಲ್ಲಿ ಮಣಿಸುವ ಮೂಲಕ 65 ಕೆಜಿ ವಿಭಾಗದ ಫ್ರಿಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಬಜರಂಗ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಅಲೆನ್ ರುದರ್ಫೋರ್ಡ್ ಅವರನ್ನು 5-4ರಲ್ಲಿ ಮಣಿಸಿದ್ದರು. ನಂತರ ಜೋಶೆಫ್ ಕ್ರಿಸ್ಟೋಫರ್ ಮೆಕೆನ್ನಾ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ 4-2 ಅಂಕಗಳ ಅಂತರದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಸೆಮಿಫೈನಲ್‌ನಲ್ಲಿ ಅವರು ಉಕ್ರೇನ್‌ನ ವಾಸಿಲ್ ಶಪ್ಟರ್ ಎದುರು 6-4ರಿಂದ ಮಣಿಸಿದ್ದ ಬಜರಂಗ್ ಇದೀಗ ಫೈನಲ್ ಪಂದ್ಯದಲ್ಲಿ ಜೋರ್ಡಾನ್ ಮೈಕಲ್ರನ್ನು ಮಣಿಸಿ 2020ರಲ್ಲಿ ಚೊಚ್ಚಲ ಚಿನ್ನದ ಪದಕ ಪಡೆದರು.
61 ಕೆಜಿ ವಿಭಾಗದಲ್ಲಿ ರವಿಕುಮಾರ್ಗೆ ಚಿನ್ನ: 57 ಕೆಜಿ ವಿಭಾಗ ಬಿಟ್ಟು 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿಕುಮಾರ್ ದಹಿಯಾ ಫೈನಲ್‌ನಲ್ಲಿ ಕಜಕಿಸ್ತಾನದ ನೂರ್ಬೊಲಾತ್ ಅಬ್ದುವಲಿಯೆವ್ ಅವರನ್ನು 12-2 ರಲ್ಲಿ ಮಣಿಸಿ ಚಿನ್ನದ ಪದಕ ಪಡೆದಿದ್ದಾರೆ. ಇದಕ್ಕೂ ಮುನ್ನ ರವಿಕುಮಾರ್ ಮೊಲ್ಡೊವಾದ ಅಲೆಕ್ಸಾಂಡ್ರು ಚಿರ್ಟೊಕಾ ಹಾಗೂ ಕಜಕಿಸ್ತಾನ ನೂರ್ ಇಸ್ಲಾಂ ಸನಾಯೆವ್ ಅವರನ್ನು ದಹಿಯಾ ಮಣಿಸಿದರು.
74 ಕೆಜಿ ವಿಭಾಗದಲ್ಲಿ ಜೀತೇಂದರ್ ಕ್ವಾರ್ಟರ್ ಫೈನಲ್‌ನಲ್ಲಿ ನಿರ್ಗಮಿಸಿದರೆ, 86 ಕೆಜಿ ವಿಭಾಗದಲ್ಲಿ ವಿಶ್ವಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದಿದ್ದ ದೀಪಕ್ ಪೂನಿಯಾ ಮೊದಲ ಸುತ್ತಿನಲ್ಲೇ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದ್ದಾರೆ.