ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧ 2ನೇ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಭಾರತದ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 196 ರನ್ಗಳ ಟಾರ್ಗೆಟ್ ನೀಡಿದರೂ ಕಳಪೆ ಫೀಲ್ಡಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡ್ ಕೈಯಿಂದ 5 ವಿಕೆಟ್ಗಳ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ 44 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ಮಹತ್ವದ ದಾಖಲೆಯೊಂದಕ್ಕೆ ಬಾಬರ್ ಅಜಮ್ ಪಾತ್ರರಾಗಿದ್ದಾರೆ.
ಬಾಬರ್ ತಮ್ಮ 39 ಇನ್ನಿಂಗ್ಸ್ನಲ್ಲಿ 1500 ರನ್ ಪೂರೈಸಿ್ದು, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 1,500 ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಆ್ಯರೋನ್ ಫಿಂಚ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇವರಿಬ್ಬರು ಕೂಡ 39ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಇದೇ ಪಂದ್ಯದಲ್ಲಿ ಬಾಬರ್ ಅಜಮ್ ಟಿ-20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸರಾಸರಿಯಲ್ಲಿ ವಿರಾಟ್ ಕೊಹ್ಲಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಅವರ ಟಿ-20 ಸರಾಸರಿ 50.90 ರಷ್ಟಿದ್ದರೆ, ಕೊಹ್ಲಿ ಸರಾಸರಿ 50.80 ಇದೆ. ನಂತರದ ಸ್ಥಾನದಲ್ಲಿ ಭಾರತದವರೇ ಆದ ಮನೀಶ್ ಪಾಂಡೆ(47.13) ಹಾಗೂ ಕೆ.ಎಲ್.ರಾಹುಲ್ (45.65) ಇದ್ದಾರೆ.