ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿದೆ. ಆಸೀಸ್ ನೆಲದಲ್ಲಿ ಭಾರತ 50 ಪಂದ್ಯಗಳನ್ನಾಡಿದ್ದು, ಇದು ಕೇವಲ 8ನೇ ಗೆಲುವಾಗಿದೆ. ವಿಶೇಷವೆಂದರೆ 8ರಲ್ಲಿ ಅರ್ಧ ಅಂದರೆ 4 ಪಂದ್ಯಗಳನ್ನು ಭಾರತ ಇದೇ ಕ್ರೀಡಾಂಗಣದಲ್ಲಿ ಗೆದ್ದಿದೆ.
ಭಾರತ ತಂಡ ಗೆದ್ದಿರುವ 8 ಪಂದ್ಯಗಳಲ್ಲಿ 4 ಎಂಸಿಜಿಯಲ್ಲಿ ಬಂದಿದ್ದರೆ, 2008ರಲ್ಲಿ ಪರ್ತ್, 1978ರಲ್ಲಿ ಸಿಡ್ನಿ, ಅಡಿಲೇಡ್ನಲ್ಲಿ 2003 ಮತ್ತು 2018ರಲ್ಲಿ ಗೆಲುವು ಸಾಧಿಸಿದೆ. ಆಸೀಸ್ ನೆಲದಲ್ಲಿ ಅದೃಷ್ಟದ ಕ್ರೀಡಾಂಗಣವಾಗಿರುವ ಎಂಸಿಜೆಯಲ್ಲಿ ಗೆದ್ದ ಆ 4 ಐತಿಹಾಸಿಕ ಟೆಸ್ಟ್ ಪಂದ್ಯಗಳ ವಿವರ ಇಲ್ಲಿದೆ.
1978ರಲ್ಲಿ 222 ರನ್ಗಳ ಜಯ
ಬಿಷನ್ ಸಿಂಗ್ ನೇತೃತ್ವದ ಭಾರತ ತಂಡ 1978ರ ಪ್ರವಾಸದಲ್ಲಿ ನಡೆದಿದ್ದ ಪಂದ್ಯದಲ್ಲಿ 222 ರನ್ಗಳ ಜಯ ಸಾಧಿಸಿತ್ತು. ಇದು ಈ ಮೈದಾನದಲ್ಲಿ ಭಾರತೀಯರ ಮೊದಲ ಗೆಲುವಾಗಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 256 ರನ್ ಗಳಿಸಿದರೆ, ಆಸ್ಟ್ರೇಲಿಯಾ 213 ರನ್ ಗಳಿಸಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ನಲ್ಲಿ ಗವಾಸ್ಕರ್ ಅವರ 118 ರನ್ಗಳ ನೆರವಿನಿಂದ 343 ರನ್ ಗಳಿಸಿ ಆಸ್ಟ್ರೇಲಿಯಾ ತಂಡಕ್ಕೆ 387 ರನ್ಗಳ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ತಂಡ ಬಿ.ಚಂದ್ರಶೇಖರ್ ದಾಳಿಗೆ ಸಿಲುಕಿ ಕೇವಲ 164 ರನ್ಗಳಿಗೆ ಆಲೌಟ್ ಆಗಿತ್ತು. ಅವರು ಎರಡು ಇನ್ನಿಂಗ್ಸ್ನಲ್ಲೂ ತಲಾ 6 ವಿಕೆಟ್ ಪಡೆದು ಗೆಲುವಿನ ರೂವಾರಿಯಾಗಿದ್ದರು.
1981ರಲ್ಲಿ 83 ರನ್ಗಳ ಜಯ
ಕಪಿಲ್ ದೇವ್ ನೇತೃತ್ವದಲ್ಲಿ 1981ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 143 ರನ್ಗಳ ಸಣ್ಣ ಟಾರ್ಗೆಟ್ ನೀಡಿಯೂ 59 ರನ್ಗಳ ಜಯ ಸಾಧಿಸಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಜಿ.ವಿಶ್ವನಾಥ್(114) ಶತಕದ ನೆರವಿನಿಂದ 237 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 419 ರನ್ ಗಳಿಸಿತ್ತು. 182 ರನ್ಗಳ ಇನ್ನಿಂಗ್ಸ್ ಹಿನ್ನಡೆಯನುಭವಿಸಿ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ 324 ರನ್ ಗಳಿಸಿ, ಆತಿಥೇಯರಿಗೆ 143 ರನ್ ಟಾರ್ಗೆಟ್ ನೀಡಿತು. ಆದರೆ ಕೇವಲ 28 ರನ್ ನೀಡಿ 5 ವಿಕೆಟ್ ಕಬಳಿಸಿದ ಕಪಿಲ್ ದೇವ್ ಆಸ್ಟ್ರೇಲಿಯಾ ತಂಡವನ್ನು 83 ರನ್ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು.
2018ರಲ್ಲಿ 137 ರನ್ಗಳ ಜಯ
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 2018ರ ಪ್ರವಾಸದಲ್ಲಿ ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ(106) ಶತಕದ ನೆರವಿನಿಂದ 443 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಬುಮ್ರಾ(6 ವಿಕೆಟ್) ಮಾರಕ ದಾಳಿಗೆ ಕುಸಿದು ಕೇವಲ 151 ರನ್ಗಳಿಗೆ ಆಲೌಟ್ ಆಗಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 106 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿದ್ದ ಸಮಯದಲ್ಲಿ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಆಸ್ಟ್ರೇಲಿಯಾಗೆ 399 ರನ್ಗಳ ಟಾರ್ಗೆಟ್ ನೀಡಿತು. ಆದರೆ ಆಸ್ಟ್ರೇಲಿಯಾ ಭಾರತದ ದಾಳಿಗೆ ಕುಸಿದು 261 ರನ್ಗಳಿಗೆ ಆಲೌಟ್ ಆಗಿ 137 ರನ್ಗಳ ಸೋಲು ಕಂಡಿತು.
2020ರಲ್ಲಿ 8 ವಿಕೆಟ್ಗಳ ಜಯ
ಕೊಹ್ಲಿ ಅನುಪಸ್ಥಿರಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಆರಂಭಿಸಿದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 195 ರನ್ಗಳಿಗೆ ಆಲೌಟ್ ಮಾಡಿತು. ನಂತರ ಮೊದಲ ಇನ್ನಿಂಗ್ಸ್ನಲ್ಲಿ ರಹಾನೆ ಅವರ (112) ಶತಕದ ನೆರವಿನಿಂದ 326 ರನ್ ಗಳಿಸಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ನಲ್ಲಿ ಭಾರತೀಯ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್ 200 ರನ್ಗಳಿಗೆ ಆಲೌಟ್ ಆಗುವ ಮೂಲಕ ರಹಾನೆ ಬಳಗಕ್ಕೆ 70 ರನ್ಗಳ ಸಾಧಾರಣ ಗುರಿ ನೀಡಿತ್ತು. ಭಾರತ ಈ ಮೊತ್ತವನ್ನು 2 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ 8 ವಿಕೆಟ್ಗಳ ಜಯ ಸಾಧಿಸಿ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿತು.
ಆಸ್ಟ್ರೇಲಿಯಾ ನೆಲದಲ್ಲಿ ಭಾರತ 50 ಟೆಸ್ಟ್ ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದರೆ, ಆಸ್ಟ್ರೇಲಿಯಾ 24ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ಟೈ ಆಗಿದ್ದರೆ, 17 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.