ನವದೆಹಲಿ: ಪ್ರಸಕ್ತ ವರ್ಷದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರದ್ದುಗೊಂಡಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕೃತ ಮಾಹಿತಿ ಹೊರಹಾಕಿದ್ದು, ಇದರಿಂದ ಪ್ರಸಕ್ತ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದು ಬಹುತೇಕ ಖಚಿತವಾಗಿದೆ.
ಬರುವ ಸೆಪ್ಟೆಂಬರ್ ತಿಂಗಳಲ್ಲಿ ದುಬೈನಲ್ಲಿ ನಡೆಯಬೇಕಾಗಿದ್ದ ಈ ಮಹತ್ವದ ಟೂರ್ನಿ ರದ್ದುಗೊಂಡಿದೆ ಎಂದು ಗಂಗೂಲಿ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆತಿಥೇಯ ದುಬೈ ಅಥವಾ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಇದುವರೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಸ್ಪೋರ್ಟ್ಸ್ ತಕ್ ಜತೆ ಮಾತುಕತೆ ನಡೆಸುತ್ತಿದ್ದ ವೇಳೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಈ ಮಾಹಿತಿ ನೀಡಿದ್ದು, ಇದರಿಂದ ಐಪಿಎಲ್ ಟೂರ್ನಾಮೆಂಟ್ ಹಾದಿ ಸುಗಮಗೊಂಡಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದೆ. ಈ ಸಲದ ಏಷ್ಯಾ ಕಪ್ ಪಾಕ್ನಲ್ಲಿ ನಡೆಯಬೇಕಾಗಿತ್ತು. ಆದರೆ ಭದ್ರತೆ ದೃಷ್ಠಿಯಿಂದ ಪಿಸಿಬಿ ಆತಿಥ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಯುಎಇಯಲ್ಲಿ ಕ್ರಿಕೆಟ್ ಟೂರ್ನಿ ನಡೆಸಲು ನಿಗದಿಪಡಿಸಲಾಗಿತು.
ಇನ್ನು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಟೂರ್ನಾಮೆಂಟ್ ನಡೆಯಬೇಕಾಗಿದ್ದು, ಅದರ ಮುಂದೂಡಿಕೆ ಸಂಬಂಧ ಮೇಲಿಂದ ಮೇಲೆ ಸಭೆ ನಡೆಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಜಗತ್ತಿನಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಮಗೆ ಆಟಗಾರರ ಸುರಕ್ಷತೆ ಅತಿ ಮುಖ್ಯವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದೇವೆ ಎಂದು 48 ವರ್ಷದ ಗಂಗೂಲಿ ಹೇಳಿಕೆ ನೀಡಿದ್ದಾರೆ.
ಇದೇ ವಿಷಯವಾಗಿ ಈ ಹಿಂದೆ ಮಾತನಾಡಿದ್ದ ಪಾಕ್ ಕ್ರಿಕೆಟ್ ಮಂಡಳಿ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಏಷ್ಯಾಕಪ್ ಟೂರ್ನಿ ರದ್ದುಗೊಳಿಸಲು ಸಾಧ್ಯವಿಲ್ಲ ಹೇಳಿತು. ಏಷ್ಯಾಕಪ್ ಕೇವಲ ಭಾರತ-ಪಾಕ್ ಟೂರ್ನಿಯಲ್ಲ. ಬೇರೆ ಇತರೆ ದೇಶಗಳು ಇದರಲ್ಲಿ ಭಾಗಿಯಾಗುತ್ತಿರುವ ಕಾರಣ ಸೆಪ್ಟೆಂಬರ್‌ನಲ್ಲಿ ಈಗಾಗಲೇ ನಿಗದಿಯಾಗಿರುವಂತೆ ಟೂರ್ನಿ ನಡೆಯಲಿದೆ ಎಂದು ತಿಳಿಸಿತು.