ಹೈದರಾಬಾದ್: ಪಾಕಿಸ್ತಾನದ ನೆಲದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂಬ ನಿಲುವನ್ನ ಬದಲಾಯಿಸಲು ಬಿಸಿಸಿಐ ಸಿದ್ಧವಿಲ್ಲ. ಹೀಗಾಗಿ ಏಷ್ಯಾ ಕಪ್ ಟೂರ್ನ್ಮೆಂಟ್ ಆತಿಥ್ಯ ವಹಿಸುವ ಕನಸು ಕಂಡಿದ್ದ ಪಾಕಿಸ್ತಾನಕ್ಕೆ ನಿರಾಸೆ ಉಂಟಾಗಿದೆ.
ಟಿ -20 ವಿಶ್ವಕಪ್ಗೂ ಮೊದಲೇ ಪ್ರಾರಂಭವಾಗುವ ಏಷ್ಯಾ ಕಪ್ ಟಿ-20 ಪಂದ್ಯಾವಳಿ ಪಾಕಿಸ್ತಾನದಿಂದ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ಭದ್ರತೆಯ ದೃಷ್ಠಿಯಿಂದ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಕ್ರಿಕೆಟ್ ತಂಡಗಳು ಹಿಂದೇಟು ಹಾಕಿದ್ದವು. ಹೀಗಾಗಿ ಕಳೆದ 2 ವರ್ಷಗಳಲ್ಲಿ ಪಾಕಿಸ್ತಾನದ ನೆಲದಲ್ಲಿ ಟಿ-20 ಸರಣಿ ಆಡಿದ ಏಕೈಕ ರಾಷ್ಟ್ರ ಎಂದರೆ ಅದು ಶ್ರೀಲಂಕಾ ಮಾತ್ರ.
ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಟೀಂ ಇಂಡಿಯಾ ಸಿದ್ಧವಿಲ್ಲ. ಹೀಗಾಗಿ ಟೂರ್ನ್ಮೆಂಟ್ ಪಾಕ್ ನೆಲದಿಂದ ಸ್ಥಳಾಂತರವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸದಸ್ಯ ನಿಜಾಮುದ್ದೀನ್ ಚೌಧರಿ, ಏಷ್ಯಾ ಕಪ್ ಆಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನ ಈ ಟೂರ್ನಿಯ ಆಯೋಜಕರಾಗಿದ್ದು, ಒಂದು ವೇಳೆ ಭಾರತ ಪಾಕ್ ಪ್ರವಾಸ ಕೈಗೊಳ್ಳಲು ನಿರಾಕರಿಸಿದರೆ ಟೂರ್ನಿ ನಡೆಯುವ ಸ್ಥಳ ಬದಲಾಗುವ ಸಾಧ್ಯತೆ ಇದೆ ಎಂದಿದ್ದಾರೆ.
2023 ರಿಂದ 2031ರ ವರೆಗೆ ಐಸಿಸಿ ಟೂರ್ನಿಗಳ ಆತಿಥ್ಯ ವಹಿಸಬಹುದೇ ಎಂಬ ಬಗ್ಗೆ ಪಿಸಿಬಿಯ ಉನ್ನತ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಮುಂದಿನ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ತನ್ನ ನೆಲದಲ್ಲಿ ದ್ವಿಪಕ್ಷೀಯ ಟೂರ್ನಿಗಳನ್ನ ಆಯೋಜಿಸುತ್ತಿದೆ. ಹೀಗಾಗಿ ಕೈಗೊಳ್ಳುವ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಏಷ್ಯಾ ಕಪ್ ಟಿ-20 ಟೂರ್ನಮೆಂಟ್ ಸ್ಥಳಾಂತರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದು ವೇಳೆ ಪಾಕಿಸ್ತಾನದಲ್ಲೆ ಟೂರ್ನಿ ಆಯೋಜನೆಗೊಂಡರೆ ಭಾರತ ಸರ್ಕಾರ ಆಟಗಾರರನ್ನ ಪಾಕಿಸ್ತಾನಕ್ಕೆ ಹೋಗಲು ಅನುಮತಿ ನೀಡುವುದೇ ಎಂಬುದು ಪ್ರಶ್ನೆಯಾಗಿದೆ.