ಮುಂಬೈ: ಭಾರತ ತಂಡದ ಮಾಜಿ ನಾಯಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿರುವ ವಿವಿಎಸ್ ಲಕ್ಷ್ಮಣ್ ಐಪಿಎಲ್ ನಡೆಯಲಿದೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದಾರಲ್ಲದೇ ಅದಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಟಿ -20 ವಿಶ್ವಕಪ್ ನಡೆಯದಿದ್ದರೆ ಐಪಿಎಲ್ ನಡೆಯುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸ್ಪಂದಿಸಿರುವ ಅನಿಲ್ ಕುಂಬ್ಳೆ ಮುಚ್ಚಿದ ಕ್ರೀಡಾಂಗಣದಲ್ಲಾದರೂ ನಡೆಸುವ ಆಲೋಚನೆ ಉತ್ತಮ ಎಂದಿದ್ದಾರೆ.
ಮಾರ್ಚ್ 29 ರಂದು ನಿಗದಿಯಾಗಿದ್ದ ಐಪಿಎಲ್ ಕೊರೊನಾ ವೈರಸ್ ಭೀತಿಯಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದೀಗ ಅಕ್ಟೋಬರ್ನಲ್ಲಿ ಟಿ -20 ವಿಶ್ವಕಪ್ ನಡೆಯದಿದ್ದರೆ ಐಪಿಎಲ್ ನಡೆಸುವುದಕ್ಕೆ ಬಿಸಿಸಿಐ ಮುಂದಾಗಿದೆ.
ಹೌದು, ನಾವು 13ನೇ ಆವೃತ್ತಿಯ ಐಪಿಎಲ್ ನಡೆಯಲಿದೆ ಎಂಬ ಆಶಾವಾದಿಗಳಾಗಿದ್ದು, ಈ ವರ್ಷವೇ ಟೂರ್ನಿ ನಡೆಯಲಿದೆ ಎಂಬ ಭರವಸೆ ಹಾಗೂ ವಿಶ್ವಾಸ ನಮ್ಮಲ್ಲಿದೆ ಎಂದು ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿರುವ ಅನಿಲ್ ಕುಂಬ್ಳೆ ಟಿವಿ ಕಾರ್ಯಕ್ರಮವೊಂದರಲ್ಲಿ ಉಲ್ಲೇಖಿಸಿದ್ದಾರೆ.
ನಾವು ಪ್ರೇಕ್ಷಕರಿಲ್ಲದೇ ಟೂರ್ನಿ ನಡೆಸುವಂತಾದರೆ, ಕೇವಲ 3 ಅಥವಾ ನಾಲ್ಕು ಸ್ಥಳಗಳಲ್ಲಿ ಟೂರ್ನಿ ನಡೆಸಲು ಸಾಧ್ಯವಾಗುತ್ತದೆ ಎಂಬ ಆಶಾಭಾವನೆಯಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, 3-4 ಕ್ರೀಡಾಂಗಣಗಳಿರುವ ನಗರದಲ್ಲಿ ಐಪಿಎಲ್ ಆಯೋಜಿಸಿದರೆ, ಪ್ರಯಾಣದ ಅವಧಿಯನ್ನು ತಗ್ಗಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ ನಾವು ಖಂಡಿತವಾಗಿಯೂ ಸ್ಟೇಕ್ ಹೋಲ್ಡರ್ಗಳ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಅನಿಲ್ ಕುಂಬ್ಳೆ ಈಗಾಗಲೆ ಮೂರು - ನಾಲ್ಕು ಸ್ಥಳಗಳಲ್ಲಿ ಆಯೋಜನೆ ಮಾಡುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನನ್ನ ಪ್ರಕಾರ ಮೂರು ನಾಲ್ಕು ಕ್ರೀಡಾಂಗಣಗಳಿರುವ ನಗರಗಳನ್ನು ಆಯ್ಕೆ ಮಾಡಿಕೊಂಡರೆ ಒಳಿತು. ಏಕೆಂದರೆ ಪ್ರಯಾಣವು ಕೂಡ ಈ ಸಂದರ್ಭದಲ್ಲಿ ಸವಾಲಿನದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.