ಮುಂಬೈ: ಮಂಗಳವಾರ 13ನೇ ಆವೃತ್ತಿಯ ಐಪಿಎಲ್ ಮುಗಿದಿದ್ದು, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ತಂಡವನ್ನು ಮಣಿಸಿ 5ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.
ಐಪಿಎಲ್ ಮುಗಿಯುತ್ತಿದ್ದಂತೆ ಕೆಲವು ಕ್ರಿಕೆಟ್ ಪಂಡಿತರು ತಮ್ಮ ನೆಚ್ಚಿನ ತಂಡವನ್ನು ಪ್ರಕಟಿಸುತ್ತಿದ್ದು, ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ತಮ್ಮಿಷ್ಟದ ತಂಡವನ್ನು ಪ್ರಕಟಿಸಿ ದಿಗ್ಗಜ ಆಟಗಾರರನ್ನು ಕಡೆಗಣಿಸಿದ್ದಾರೆ.
ಚೋಪ್ರಾ ತಮ್ಮ ತಂಡದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಈ ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ರನ್ನು ಕಡೆಗಣಿಸಿದ್ದಾರೆ.
ಆಕಾಶ್ ಚೋಪ್ರಾ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಆರಂಭಿಕರಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್‌ರನ್ನ ಆಯ್ಕೆ ಮಾಡಿದ್ದಾರೆ. ಇವರಿಬ್ಬರು ಈ ಆವೃತ್ತಿಯ ಟಾಪ್ ಸ್ಕೋರರ್ ಆಗಿದ್ದಾರೆ. ಇನ್ನು 3 ಮತ್ತು 4ನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ರನ್ನು ಆಯ್ಕೆ ಮಾಡಿದ್ದಾರೆ.
5ನೇ ಕ್ರಮಾಂಕದಲ್ಲಿ ಆರ್‌ಸಿಬಿ ತಂಡದ ಲೆಜೆಂಡ್ ಎಬಿ ಡಿ ವಿಲಿಯರ್ಸ್, 6ನೇ ಕ್ರಮಾಂಕದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ರಾಹುಲ್ ತೆವಾಟಿಯಾರನ್ನು ಆಯ್ಕೆ ಮಾಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕೋಟಾದಲ್ಲಿ ರಶೀದ್ ಖಾನ್ ಮತ್ತು ಚಹಾಲ್, ವೇಗಿಗಳ ವರ್ಗದಲ್ಲಿ ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ ಹಾಗೂ ಕಾಗಿಸೋ ರಬಾಡರನ್ನು ಆಯ್ಕೆ ಮಾಡಿದ್ದಾರೆ.
ಆಕಾಶ್ ಚೋಪ್ರಾ 2020ರ ಐಪಿಎಲ್ ತಂಡ:
ಕೆ.ಎಲ್.ರಾಹುಲ್, ಶಿಖರ್ ಧವನ್, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಎಬಿ ಡಿ ವಿಲಿಯರ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯುಜ್ವೇಂದ್ರ ಚಹಲ್, ಜೋಫ್ರಾ ಆರ್ಚರ್, ಜಸ್ಪ್ರಿತ್ ಬುಮ್ರಾ, ಕಾಗಿಸೊ ರಬಾಡ.