ನವದೆಹಲಿ: ಕೊರೊನಾ ಭೀತಿಯಿಂದ ಬಿಸಿಸಿಐ ಈ ಬಾರಿ ಆಟಗಾರರ ಜೊತೆ ಕುಟುಂಬದವರು ಇರುವಿಕೆಯನ್ನು ನಿಷೇಧಿಸುವ ಬಗ್ಗೆ ಆಲೋಚಿಸುತ್ತಿರುವುದಕ್ಕೆ ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಭಾರತ ಟೆಸ್ಟ್ ತಂಡದ ಉಪನಾಯಕ ರಹಾನೆ ತಿಳಿಸಿದ್ದಾರೆ.
13ನೇ ಆವೃತ್ತಿಯಲ್ಲಿ ರಹಾನೆ ಇದೇ ಡೆಲ್ಲಿ ಕ್ಯಾಪಿಟಲ್ ಪರವಾಗಿ ಆಡಲಿದ್ದಾರೆ. ಬಯೋ ಸೆಕ್ಯೂರ್ ವಾತಾವರಣದಲ್ಲಿ ಐಪಿಎಲ್ ಆಯೋಜಿಸುವುದರಿಂದ ಕ್ರಿಕೆಟಿಗರ ಜೊತೆ ಪತ್ನಿ ಮತ್ತು ಮಕ್ಕಳು ಇರುವುದನ್ನು ನಿಷೇಧಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಕುರಿತು ಮಾತನಾಡಿರುವ ರಹಾನೆ ನಾನು ಐಪಿಎಲ್ ವೇಳೆ ಪತ್ನಿ ಮತ್ತು ಮಗಳು ನನ್ನ ಜೊತೆ ಇರಬೇಕೆಂದು ಬಯಸುತ್ತೇನೆ, ಆದರೆ ಬಿಸಿಸಿಐ ಕೋವಿಡ್ 19 ಭೀತಿಯಿಂದ ಕುಟುಂಬವನ್ನು ದೂರವಿರಿಸಲು ಬಯಸಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.
ಐಪಿಎಲ್ ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಯುಎಇನಲ್ಲಿ ಆಯೋಜನೆಗೊಂಡಿದೆ. ಕೋವಿಡ್ 19 ಭೀತಿಯಿಂದ ಈ ಬಾರಿ ಭಾರತದಿಂದ ಯುಎಇಗೆ ಸ್ಥಳಾಂತರ ಮಾಡಲಾಗಿದೆ.
ರಾಜಸ್ಥಾನ್ ರಾಯಲ್ಸ್‌ನಿಂದ ದೆಹಲಿ ಕ್ಯಾಪಿಟಲ್ಗೆ ವರ್ಗಾವಣೆಕೊಂಡಿರುವ ರಹಾನೆ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಒಬ್ಬ ವ್ಯಕ್ತಿಯಾಗಿ ಕೋವಿಡ್ 19 ಸಂದರ್ಭದಲ್ಲಿ ನಿಮ್ಮ ಕುಟುಂಬದವರು ನಿಮ್ಮ ಜೊತೆ ಪ್ರಯಾಣಿಸಬೇಕೆಂದು ಬಯಸುತ್ತೀರಿ. ಆದರೆ ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಮುಖ್ಯವಾಗಿದೆ. ನಿಮ್ಮ ಕುಟುಂಬ, ನಿಮ್ಮ ಮಗಳು, ನಿಮ್ಮ ತಂಡದ ಸದಸ್ಯರ ಆರೋಗ್ಯ ನಿಜವಾಗಿಯೂ ಮುಖ್ಯವಾಗಿದೆ ಎಂದು ರಹಾನೆ ಟಿವಿ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.
ನಾವು ಈಗಾಗಲೆ ಕುಟಂಬದ ಜೊತೆ ಲಾಕ್ಡೌನ್ ಸಂದರ್ಭದಲ್ಲಿ 4-5 ತಿಂಗಳು ಕಳೆದಿದ್ದೇವೆ. ಹಾಗಾಗಿ ಪ್ರಸ್ತುತ ಆರೋಗ್ಯ ಮುಖ್ಯ. ಮತ್ತು ನಂತರ ಕ್ರಿಕೆಟ್ಗೂ ಪ್ರಾಮುಖ್ಯತೆ ನೀಡಬೇಕು. ಹೀಗಾಗಿ ಕುಟುಂಬವರು ಆಟಗಾರರ ಜೊತೆ ಇರಬೇಕ ಅಥವಾ ಬೇಡವಾ ಎಂಬುದರ ನಿರ್ಧಾರ ಪ್ರಾಂಚೈಸಿ ಮತ್ತು ಬಿಸಿಸಿಐ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
" ನಮ್ಮ ಸುತ್ತಾ ಮುತ್ತಾ ಇನ್ನೂ ಕರೋನಾ ಇದೆ, ಈ ಪರಿಸ್ಥಿತಿಯಲ್ಲಿ ನೀವು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಯೋಚಿಸಬೇಕು, ನಿಮ್ಮ ಕುಟುಂಬದ ಬಗ್ಗೆ ವಿಶೇಷವಾಗಿ ಹೆಂಡತಿ ಮತ್ತು ಮಗಳ ಬಗ್ಗೆ ಯೋಚಿಸಬೇಕು. ಸುರಕ್ಷತೆ ನಿಜವಾಗಿಯೂ ಮುಖ್ಯವಾಗಿದೆ" ಎಂದು ಅವರು ಹೇಳಿದ್ದಾರೆ.
ಇನ್ನು ರಿಕಿ ಪಾಂಟಿಂಗ್ ಕೋಚಿಂಗ್ನಲ್ಲಿ ಹಾಗೂ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಆಡುವುದಕ್ಕೆ ತಾವೂ ಉತ್ಸುಕರಾಗಿರುವುದಾಗಿ ರಹಾನೆ ತಿಳಿಸಿದ್ದಾರೆ. ರಹಾನೆ 140 ಐಪಿಎಲ್ ಪಂದ್ಯಗಳನ್ನಾಡಿದ್ದು, 3820 ರನ್ಗಳಿಸಿದ್ದಾರೆ. ಇದರಲ್ಲಿ 27 ಅರ್ಧಶತಕ ಹಾಗೂ 2 ಶತಕ ಕೂಡ ಸೇರಿವೆ.