ನವದೆಹಲಿ: ಇದೇ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಿಂದ ಕೈ ಬಿಟ್ಟ ಬಗ್ಗೆ ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಮೌನ ಮುರಿದಿದ್ದಾರೆ.
ಕೆಲವೊಮ್ಮೆ, ನಮ್ಮ ಯಶಸ್ಸಿನ ಅನ್ವೇಷಣೆಯಲ್ಲಿ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಆದರೆ ಅದನ್ನು ನಿಲ್ಲಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕು. 2019ರ ವಿಶ್ವಕಪ್‌ಗೆ ನನ್ನನ್ನು ಆಯ್ಕೆ ಮಾಡದಿದ್ದಾಗ ನಾನೂ ಅದನ್ನೇ ಮಾಡಿದ್ದೇನೆ ಎಂದು ರಹಾನೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ನಾನು ಇದೀಗ ಉತ್ತಮ ಜಾಗದಲ್ಲಿದ್ದೇನೆ. ಇಲ್ಲಿ ವೆಸ್ಟ್ ಇಂಡೀಸ್ ಸರಣಿ ನಡೆಯುತ್ತಿದ್ದರೆ, ನಾನು ಇಂಗ್ಲೆಂಡಿನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದೆ. ಅಲ್ಲಿ ನಾನು ಕ್ರಿಕೆಟಿಗನಾಗಿ ಮಾತ್ರವಲ್ಲದೇ, ಮನುಷ್ಯನಾಗಿಯೂ ಸಾಕಷ್ಟು ಕಲಿತಿದ್ದೇನೆ ಎಂದು ರಹಾನೆ ಹೇಳಿದ್ದಾರೆ.
ಕಳೆದ 2 ತಿಂಗಳಲ್ಲಿ ನಾನು 7 ಪಂದ್ಯಗಳನ್ನ ಆಡಿದ್ದೇನೆ. ಕೇವಲ ಆನ್ ಫೀಲ್ಡ್ ಮಾತ್ರವಲ್ಲದೆ, ಆಫ್ ದಿ ಫೀಲ್ಡ್ನಲ್ಲೂ ನಾನು ಸಾಕಷ್ಟು ವಿಚಾರಗಳ ಬಗ್ಗೆ ಕಲಿತಿದ್ದೇನೆ. ಕೆಲವೊಮ್ಮೆ ನಾನು ಪಾರ್ಕ್ನಲ್ಲಿ ಒಬ್ಬನೇ ವಾಕ್ ಮಾಡುವಾಗ, ಕಾಫಿ ಹೀರುತ್ತಾ ಕುಳಿತಾಗ ನನ್ನ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಿರುತ್ತೇನೆ. ಕ್ಲಬ್ ಕ್ರಿಕೆಟ್, ಗ್ರೂಪ್ ಕ್ರಿಕೆಟ್ ಆಡುವಾಗ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೊದಲಿನ ದಿನಗಳಲ್ಲಿ ನನ್ನ ಯೋಚನೆ ಏನಿತ್ತು ಎಂಬುದರ ಬಗ್ಗೆ ಮನನ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಜೊತೆಯಲ್ಲಿ ಕೂಡ ಚರ್ಚೆ ನಡೆಸಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಕಲಿತಿದ್ದೇನೆ ಎಂದಿದ್ದಾರೆ. ಈಗ ನನ್ನ ಮೈಂಡ್ಸೆಟ್ ಉತ್ತಮವಾಗಿದೆ. ಈ ಹಿಂದೆ ನಡೆದಿದ್ದರ ಬಗ್ಗೆ ಚಿಂತಿಸದೆ ಮುಂದಿನ ಪಂದ್ಯಗಳ ಬಗ್ಗೆ ಗಮನ ಕೊಡುತ್ತೇನೆ ಎಂದಿದ್ದಾರೆ.
ಪತ್ನಿ ಬಗ್ಗೆಯೂ ಮಾತನಾಡಿರುವ ರಹಾನೆ, ನನ್ನ ಹೆಂಡತಿ ರಾಧಿಕಾ ನನಗೆ ಯಾವಾಗಲೂ ಬೆಂಬಲ ನೀಡುತ್ತಿರುತ್ತಾಳೆ. ಆಕೆ ಸದಾ ಧನಾತ್ಮಕ ವಿಚಾರಗಳ ಬಗ್ಗೆ ಮಾತನಾಡುತ್ತಾಳೆ. ಹಾಗೆಯೇ ಕೆಲವು ವಿಚಾರದಲ್ಲಿ ನನ್ನನ್ನು ನೇರವಾಗಿ ಟೀಕಿಸುತ್ತಾಳೆ. ಕುಟುಂಬದವರು ಕೆಲವು ಸ್ನೇಹಿತರು ಕೂಡಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ರಹಾನೆ ಸ್ಮರಿಸಿದ್ರು.
ನನ್ನ ಬಗ್ಗೆ ಜನ ಏನು ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ನನ್ನ ಮೇಲಿರುವ ನಂಬಿಕೆಯೇ ನನಗೆ ಮುಖ್ಯ. ಕಳೆದ 2 ವರ್ಷಗಳಲ್ಲಿ ನನ್ನ ಸಾಧನೆ ಉತ್ತಮವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೂ ನನ್ನ ಸಾಧನೆ ಉತ್ತಮವಾಗಿದೆ. ಖಂಡಿತವಾಗಿಯೂ ನಾನು ಏಕದಿನ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡುತ್ತೇನೆ ಎಂದು ರಹಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.