ನವದೆಹಲಿ: ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ದೇವ್ ಇತ್ತೀಚೆಗೆ ಆಂಜಿಯೋಪ್ಲ್ಯಾಸ್ಟಿ ಸರ್ಜರಿಗೆ ಒಳಗಾಗಿದ್ದರು. ಇದೀಗ ತಾವು ಆರೋಗ್ಯದಿಂದಿರುವುದಾಗಿ ತಿಳಿಸಿರುವ ಅವರು 1983ರ ವಿಶ್ವಕಪ್ ವಿಜೇತ ತಂಡದ ಆಟಗಾರರನ್ನು ಭೇಟಿ ಮಾಡುವುದಕ್ಕೆ ಎದುರು ನೋಡುತ್ತಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.
61 ವರ್ಷದ ಕಪಿಲ್ ದೇವ್ 1983ರ ವಿಶ್ವಕಪ್ ವಿಜೇತ ತಂಡದ ಆಟಗಾರರಿರುವ ವಾಟ್ಸಪ್ ಗ್ರೂಪ್ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
"1983ರ ನನ್ನ ಕುಟುಂಬದವರೇ, ನಿಮ್ಮನ್ನೆಲ್ಲಾ ಭೇಟಿ ಮಾಡವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಆ ಸಂದರ್ಭ ನನಗೆ ತುಂಬಾ ಆಹ್ಲಾದಕರವಾಗಿರುತ್ತದೆ. ನಾನು ಆರಾಮವಾಗಿದ್ದೇವೆ. ನನ್ನ ಆರೋಗ್ಯ ಉತ್ತಮವಾಗಿದೆ. ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಆದಷ್ಟು ಬೇಗ ಭೇಟಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ. 83 ಚಲನಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ನನಗೆ ಗೊತ್ತಿಲ್ಲ, ಆದರೆ ನಾನು ಸಾಧ್ಯವಾದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಮಾಡಲು ಪ್ರಯತ್ನಿಸುತ್ತೇನೆ" ಎಂದು ತಿಳಿಸಿದ್ದಾರೆ.
ನಾವು ಈ ವರ್ಷದ ಅಂತ್ಯ ತಲುಪಿದ್ದೇವೆ. ಮತ್ತು ಮುಂದಿನ ವರ್ಷಕ್ಕೆ ನಾವು ಉತ್ತಮ ಆರಂಭ ಪಡೆಯಲಿದ್ದೇವೆ ಎಂದು ನನಗೆ ವಿಶ್ವಾಸವಿದೆ ಎಂದು ಆ ವಿಡಿಯೋದಲ್ಲಿ ಹೇಳಿದ್ದಾರೆ.
ಕಪಿಲ್ ದೇವ್ ಕಳೆದ ಗುರುವಾರ ಹೃದಯಾಘಾತಕ್ಕೆ ಒಳಗಾಗಿದ್ದರು. ಮರುದಿನ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.