ಬರ್ಮಿಂಗ್ಹ್ಯಾಮ್: 2022ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್(Commonwealth Games)ನಲ್ಲಿ ಮಹಿಳಾ ಕ್ರಿಕೆಟ್ ಆಯೋಜನೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿ ಮಹಿಳಾ ಕ್ರಿಕೆಟ್ ಆಡಿಸಲಾಗುತ್ತಿದೆ. ಭಾರತ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.
ಜುಲೈ 29ರಂದು ಉಭಯ ತಂಡಗಳ ಮಧ್ಯೆ ಪಂದ್ಯ ಆಯೋಜನೆಗೊಂಡಿದೆ. ಆಗಸ್ಟ್ 7ರಂದು ಫೈನಲ್ ಪಂದ್ಯಕ್ಕಾಗಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಟಿ-20 ಮಾದರಿಯ ಕ್ರಿಕೆಟ್ ನಡೆಯಲಿದೆ.
ವೇಳಾಪಟ್ಟಿ ಪ್ರಕಾರ ಜುಲೈ 29ರಂದು ಆಸ್ಟ್ರೇಲಿಯಾ-ಭಾರತ(India vs Australia) ಹಾಗೂ ಪಾಕಿಸ್ತಾನ-ವೆಸ್ಟ್ ಇಂಡೀಸ್ ತಂಡಗಳ ನಡುವೆ ಪಂದ್ಯ ಆಯೋಜನಗೊಂಡಿವೆ. ಉಳಿದಂತೆ ಆಗಸ್ಟ್ 7ರಂದು ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಪಂದ್ಯಗಳು ನಿಗದಿಯಾಗಿವೆ.
ಈ ಹಿಂದೆ 1998ರ ಕಾಮನ್ವೆಲ್ತ್ನಲ್ಲಿ ಪುರುಷರ ಕ್ರಿಕೆಟ್ ಪಂದ್ಯ ನಡೆಸಲಾಗಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗಿಯಾಗಲಿವೆ. ಜುಲೈ 29ರಿಂದ ಆಗಸ್ಟ್ 7ರವರೆಗೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.