ಜೈಪುರ್(ರಾಜಸ್ಥಾನ) : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಟೂರ್ನಿಯಲ್ಲಿ ಭಾಗಿಯಾಗಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಗ್ನಿಪರೀಕ್ಷೆಗೊಳಗಾಗಲಿದೆ. ಹೊಸ ಕೋಚ್ ಆಗಿ ತಂಡ ಸೇರಿಕೊಂಡಿರುವ ರಾಹುಲ್ ದ್ರಾವಿಡ್ಗೂ ಸಹ ಹೊಸ ಸವಾಲು ಎದುರಾಗಲಿದೆ.
ಜೈಪುರ್ದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಮೊದಲ ಪಂದ್ಯ ಆರಂಭಗೊಳ್ಳುತ್ತಿದೆ. ಅದಕ್ಕೂ ಮುಂಚಿತವಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ನೂತನ ಕೋಚ್ ರಾಹುಲ್ ದ್ರಾವಿಡ್ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ರೋಹಿತ್ ಶರ್ಮಾ ಹೇಳಿದ್ದೇನು?
ಟೀಂ ಇಂಡಿಯಾದಲ್ಲಿ ಎಲ್ಲ ಆಟಗಾರರು ಪ್ರಮುಖರು. ಕೇವಲ ಒಬ್ಬ ಅಥವಾ ಇಬ್ಬರು ಪ್ಲೇಯರ್ಸ್ ಮೇಲೆ ನಾವು ಕಣ್ಣಿಟ್ಟಿಲ್ಲ. ಖಂಡಿತವಾಗಿ ಆಲ್ರೌಂಡರ್ ಆಟಗಾರರ ಪ್ರಾಮುಖ್ಯತೆ ಹೆಚ್ಚಾಗಿರುತ್ತದೆ. ಆದರೆ, ಯಶಸ್ವಿ ತಂಡವಾಗಿ ಹೊರ ಹೊಮ್ಮಲು ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದರು.
ವಿರಾಟ್ ಕೊಹ್ಲಿ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ. ಅವರು ತಂಡದಲ್ಲಿ ಇರುವುದು ಮತ್ತಷ್ಟು ಶಕ್ತಿ ನೀಡುತ್ತದೆ. ಆಟಗಾರರು ಯಂತ್ರವಲ್ಲ. ಅವರಿಗೆ ಬಿಡುವು ಅವಶ್ಯವಾಗಿರುತ್ತದೆ. ಅದೇ ಕಾರಣಕ್ಕಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಟೂರ್ನಿಗೋಸ್ಕರ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದರು.
ಪಂದ್ಯಗಳಲ್ಲಿ ಎಲ್ಲ ಆಟಗಾರರು ನಿರ್ಭೀತಿಯಿಂದ ಆಟವಾಡಲು ಅವಕಾಶ ನೀಡುತ್ತೇನೆ ಎಂದಿರುವ ರೋಹಿತ್ ಶರ್ಮಾ, ತಮ್ಮ ಪಾತ್ರ ಏನು ಎಂಬುದನ್ನ ಸಾಬೀತುಪಡಿಸಲು ಅವಕಾಶ ನೀಡಲಾಗುವುದು. ಬರುವ ದಿನಗಳಲ್ಲಿ ನಮಗೆ ತುಂಬಾ ಸವಾಲುಗಳಿವೆ. ಹೀಗಾಗಿ, ಇತರೆ ತಂಡಗಳ ಟೆಂಪ್ಲೇಟ್ ಅನುಸರಣೆ ಮಾಡುವುದಿಲ್ಲ ಎಂದರು.
ಕೋಚ್ ರಾಹುಲ್ ದ್ರಾವಿಡ್ ಮಾತು
ನಾವು ವಿಭಿನ್ನ ಸ್ವರೂಪಗಳಲ್ಲಿ ಪ್ರತ್ಯೇಕ ತಂಡಗಳನ್ನು ಹುಡುಕುವ ಹಂತದಲ್ಲಿಲ್ಲ. ಈ ಸಮಯದಲ್ಲಿ ನಾವು ಆಟಗಾರರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗೌರವಿಸಬೇಕು. ಆಟಗಾರರು ರಿಫ್ರೆಶ್ ಮತ್ತು ಸ್ವಿಚ್ ಆನ್ ಆಗಬೇಕೆಂದು ನಾನು ಬಯಸುತ್ತೇನೆ. ಇದು ಸವಾಲಿನ ಸಮಯವಾಗಿದೆ.
ಆದ್ದರಿಂದ ನಾನು ಆಟಗಾರರೊಂದಿಗೆ ಕೆಲಸ ಮಾಡಲು ಮತ್ತು ಅವರು ಚೆನ್ನಾಗಿ ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ಎಲ್ಲಾ ಫಾರ್ಮ್ಯಾಟ್‌ಗಳನ್ನು ಆಡುವ ಆಟಗಾರರು ಈಗ ಆಡದೇ ಇರಬಹುದು. ಅದು ಇತರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಾಗಲಿದೆ. ಈ ಹಂತದಲ್ಲಿ ನಾನು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರತ್ಯೇಕ ತಂಡಗಳನ್ನು ಹುಡುಕುತ್ತಿಲ್ಲ ಎಂದು ರಾಹುಲ್ ದ್ರಾವಿಡ್ ತಿಳಿಸಿದರು.
ದೂರದೃಷ್ಟಿಗೆ ಸಂಬಂಧಿಸಿದಂತೆ ನಾವು ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಐಸಿಸಿ ಟೂರ್ನಾಮೆಂಟ್ಗಳು ಬರುತ್ತಿರುವ ಕಾರಣ ತಂಡ ತಯಾರಿ ಮಾಡಬೇಕಾಗಿದೆ. ಅದಕ್ಕಾಗಿ ಉತ್ತಮ ತಂಡ ಕಟ್ಟುವ ಅಗತ್ಯವಿದೆ ಎಂದರು. ಮಾನಸಿಕ ಮತ್ತು ದೈಹಿಕ ಆರೋಗ್ಯ ಆಟಗಾರರಿಗೆ ಮುಖ್ಯವಾಗಿರುತ್ತದೆ. ಹೀಗಾಗಿ, ಫಿಟ್ ಆಗಿರಲು ಕೆಲ ಪಂದ್ಯಗಳಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ ಎಂದರು.
ಇದನ್ನೂ ಓದಿರಿ: Syed Mushtaq Ali Trophy: ರೋಚಕ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ತಲುಪಿದ ಕರ್ನಾಟಕ
ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ನವೆಂಬರ್ 17, 19 ಹಾಗೂ 21ರಂದು ಕ್ರಮವಾಗಿ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ.
ಟಿ-20 ಟೀಂ ಇಂಡಿಯಾ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.