ಬೆಂಗಳೂರು: ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಪ್ರವಾಸಿ ಶ್ರೀಲಂಕಾ ತಂಡವನ್ನು ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 109ರನ್ಗಳಿಗೆ ಆಲೌಟ್ ಮಾಡಿ 143 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡ 252 ರನ್ಗಳಿಗೆ ಆಲೌಟ್ ಆದರೆ, ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 86 ರನ್ಗಳಿಸಿತ್ತು. ಆದರೆ ಇಂದು ಆ ಮೊತ್ತಕ್ಕೆ ಕೇವಲ 23 ರನ್ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಶನಿವಾರ 10 ರನ್ಗಳಿಸಿ ಅಜೇಯರಾಗಿ ಉಳಿದಿದ್ದ ನಿರೋಶನ್ ಡಿಕ್ವೆಲ್ಲಾ ಇಂದು 21 ರನ್ ಮತ್ತು ಲಸಿತ್ ಎಂಬುಲ್ದೇನಿಯಾ 1 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಲಕ್ಮಲ್(5) ಮತ್ತು ವಿಶ್ವ ಫರ್ನಾಂಡೊ(8) ವಿಕೆಟ್ಗಳು ಅಶ್ವಿನ್ ಪಾಲಾದವು.
ನಿನ್ನೆ ಭಾರತದ 252 ರನ್ಗಳನ್ನು ಹಿಂಬಾಲಿಸಿದ ಶ್ರೀಲಂಕಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 86ರನ್ಗಳಿಸುವಷ್ಟರಲ್ಲಿ ತನ್ನ 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಕುಸಾಲ್ ಮೆಂಡಿಸ್(2), ಲಹಿರು ತಿರುಮನ್ನೆ(5) ಮತ್ತು ಏಂಜೆಯೋ ಮ್ಯಾಥ್ಯೂಸ್(43) ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಮೊಹಮ್ಮದ್ ಶಮಿ ಲಂಕಾ ನಾಯಕ ಕರುಣರತ್ನೆ(4) ಮತ್ತು ಆಲ್ರೌಂಡರ್ ಧನಂಜಯ ಡಿ ಸಿಲ್ವಾ(10) ರನ್ನು ಪೆವಿಲಿಯನ್ಗಟ್ಟಿದರು. ಉತ್ತಮ ಲಯದಲ್ಲಿರುವ ಚರಿತ್ ಅಸಲಂಕಾ (10) ವಿಕೆಟ್ ಆಲ್ರೌಂಡರ್ ಅಕ್ಷರ್ ಪಟೇಲ್ ಸ್ಪಿನ್ ಜಾಲಕ್ಕೆ ಬಿದ್ದರು.
ಜಸ್ಪ್ರೀತ್ ಬುಮ್ರಾ 24ಕ್ಕೆ 5, ರವಿಚಂದ್ರನ್ ಅಶ್ವಿನ್ 30ಕ್ಕೆ2 ಮತ್ತು ಮೊಹಮ್ಮದ್ ಶಮಿ 18ಕ್ಕೆ 2 ಹಾಗೂ ಅಕ್ಷರ್ ಪಟೇಲ್ 21ಕ್ಕೆ 1ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೂಡ ಪ್ರವಾಸಿ ತಂಡದ ಸ್ಪಿನ್ ದಾಳಿಗೆ ತತ್ತರಿಸಿ 252 ರನ್ಗಳಿಸಿತ್ತು. ಶ್ರೇಯಸ್ ಅಯ್ಯರ್ 92 ಮತ್ತು ಪಂತ್ 39 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು.
ಇದನ್ನೂ ಓದಿ:ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ಆರ್ಸಿಬಿಗೆ ಕೃತಜ್ಞನಾಗಿರುತ್ತೇನೆ: ಡುಪ್ಲೆಸಿಸ್