ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ಪಡೆದುಕೊಂಡಿದೆ. ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ ಪಾಯಿಂಟ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಕಳೆದ ವರ್ಷದ ಆವೃತ್ತಿಯಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಬಗ್ಗೆ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯಾನ್ ಲಾರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಈ ಸಲದ ಟೂರ್ನಿಗೋಸ್ಕರ ಅವರಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿನ ಟಿ-20 ವಿಶ್ವಕಪ್ ಆಡಲು ಪಾಕ್ ಕ್ರಿಕೆಟ್ ಪ್ಲೇಯರ್ಸ್ಗೆ ವೀಸಾ : ಜಯ್ ಶಾ
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಪಡಿಕ್ಕಲ್ ಶತಕ ಬಾರಿಸುವಂತೆ ಟಾಸ್ಕ್ ನೀಡಿದ್ದು, ಕೆಲವು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವಂತೆ ಹೇಳಿದ್ದಾರೆ. ದೇವದತ್ ಪಡಿಕ್ಕಲ್ ಓರ್ವ ಪ್ರತಿಭಾವಂತ ಆಟಗಾರನಾಗಿದ್ದು, ಕೆಲವೊಂದು ಸಣ್ಣ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಐಪಿಎಲ್ನಲ್ಲಿ ಐದು ಅರ್ಧಶತಕ ಸೇರಿ 474 ರನ್ ಗಳಿಸಿದ್ದಾರೆ. ಈ ಸಲ ಆಡಿರುವ ಒಂದು ಪಂದ್ಯದಲ್ಲಿ ಕೇವಲ 11 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಡಿಕ್ಕಲ್ 737 ರನ್ ಗಳಿಸಿದ್ದರು.