ಲಂಡನ್: ಇಂಗ್ಲೆಂಡ್ ಟೆಸ್ಟ್ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ವರ್ಷದ ಕೊನೆಯಲ್ಲಿ ನಡೆಯುವ ಆಶಸ್ ಕದನದತ್ತ ಚಿತ್ತ ಹರಿಸಿದ್ದಾರೆ. 8 ಜನ ವೇಗದ ಬೌಲರ್‌ಗಳನ್ನು ತಂಡದಲ್ಲಿ ಹೊಂದುವ ಬಗ್ಗೆ ಮಾತನಾಡಿದ್ದಾರೆ. ಕಳೆದ ಬಾರಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಆಘಾತಕ್ಕೆ ಉತ್ತರ ನೀಡಲು ಸ್ಟೋಕ್ಸ್ ಬಯಸಿದ್ದು, ತವರಿನಲ್ಲಿ ನಡೆಯುವ ಪಂದ್ಯದಲ್ಲಿ ವೇಗಿಗಳ ಸಹಾಯದಿಂದ ಕಾಂಗರೂಗಳನ್ನು ಕಟ್ಟಿಹಾಕಲು ಚಿಂತಿಸಿದ್ದಾರೆ.
ಇಂಗ್ಲೆಂಡ್ಗೆ ನೂತನ ಕೋಚ್ ಆಗಿ ಬ್ರೆಂಡನ್ ಮೆಕಲಮ್ ಸೇರಿಸಿಕೊಂಡಿದ್ದಾರೆ. ನಂತರ ತಂಡದಲ್ಲಿ ಕೆಲ ಬದಲಾವಣೆಯ ಗಾಳಿ ಬೀಸಿದೆ. ಅದರ ಜೊತೆಗೆ ನಾಯಕನ ಸ್ಥಾನವನ್ನು ಸ್ಟೋಕ್ಸ್ಗೆ ನೀಡಿದ ನಂತರ ಆಂಗ್ಲರ ಟೆಸ್ಟ್ ಪ್ರದರ್ಶನ ಉತ್ತಮವಾಗಿದೆ. ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಆಡಿದ 12 ಟೆಸ್ಟ್‌ಗಳಲ್ಲಿ 10 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ.
"ನಾನು 20 ಜನರ ತಂಡವನ್ನು ಮಾಡುವ ಉತ್ಸಾಹದಲ್ಲಿದ್ದೇನೆ. ನಮಗೆ ಆಯ್ಕೆ ಮಾಡಲು ಎಂಟು ಬೌಲರ್‌ಗಳನ್ನು ನೀಡುವಂತೆ ನಾನು ವೈದ್ಯಕೀಯ ತಂಡವನ್ನು ಕೇಳಿದ್ದೇವೆ. ಈ ವರ್ಷದ ಆಟ ಹೆಚ್ಚು ಕುತೂಹಲದಿಂದ ಕೂಡಿರಲಿದೆ. ಹೀಗಾಗಿ ಪ್ರತೀ ಪಂದ್ಯದಲ್ಲೂ ಸರಿಯಾಗಿ ಆಟಗಾರರನ್ನು ಬಳಸುವ ಬಗ್ಗೆ ನಾನು ಚಿಂತಿಸುತ್ತಿದ್ದೇನೆ" ಎಂದು ಸ್ಟೋಕ್ಸ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
31 ವರ್ಷದ ಸ್ಟೋಕ್ಸ್ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ಆಡುತ್ತಿದ್ದು, ಕಾಲು ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಈ ಕಾರಣದಿಂದ ಅವರು ಕಳೆದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಇಂದು ರಾಜಸ್ಥಾನದ ಮೇಲೆ ಚೆನ್ನೈ ಕಣಕ್ಕಿಳಿಯುತ್ತಿದ್ದು, ಇಂದು ಆಡುವುದು ಅನುಮಾನವಾಗಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಆಶಸ್ ಸರಣಿ ಇರುವುದರಿಂದ ನಾಯಕ ಸ್ಟೋಕ್ಸ್ ಈಗಾಗಲೇ ಆಡುವ ಬಳಗದ ಬಗ್ಗೆ ಚಿಂತಿಸುತ್ತಿದ್ದಾರೆ.
ಐದು ಪಂದ್ಯಗಳ ಆಶಸ್ ಸರಣಿಯು ಜೂನ್ 16 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುತ್ತದೆ. 2021-22 ರಲ್ಲಿ ಜೋ ರೂಟ್ ನೇತೃತ್ವದಲ್ಲಿ 0-4 ಸೋಲಿನ ಅವಮಾನದ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಕಾಯುತ್ತಿದೆ. "ಇಂಗ್ಲೆಂಡ್ನಲ್ಲಿ ಹಲವಾರು ಪ್ರತಿಭಾವಂತ ಆಟಗಾರರಿದ್ದಾರೆ. ಆಡುವ ಹನ್ನೊಂದರ ಬಳಗದ ಬಗ್ಗೆ ನಾನು ಈಗಾಗಲೇ ಕೆಲವರನ್ನು ಆಯ್ಕೆ ಮಾಡಿದ್ದೇನೆ" ಎಂದು ಸ್ಟೋಕ್ಸ್ ಹೇಳಿದರು.
ಸ್ಟೋಕ್ಸ್ ಮತ್ತು ಮೆಕಲಮ್ ಇಂಗ್ಲೆಂಡ್ಗೆ ಸೇರಿದಾಗಿನಿಂದ ಒಂದು ಓವರ್ಗೆ ತಂಡ ಸರಾಸರಿ 4.76 ರನ್ ಕಲೆಹಾಕುತ್ತಿದೆ. ತಂಡದ ಬ್ಯಾಟಿಂಗ್ ಹೊಸ ಆಯಾಮ ದೊರೆತಿದೆ ಎಂದು ವಿಮರ್ಶೆಗಳಾಗುತ್ತಿವೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವೇಗದ ಬೌಲಿಂಗ್ನಲ್ಲಿ ಉತ್ತಮ ಆಯ್ಕೆಗಳನ್ನು ಹೊಂದಿದೆ. ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಓಲಿ ಸ್ಟೋನ್ ಅವರೊಂದಿಗೆ ಅನುಭವಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಸಹ ಇದ್ದಾರೆ.
2019ರಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆರ್ಚರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆದರೆ, ಈ ಸರಣಿಯ ವೇಳೆ ಆರ್ಚರ್ ಮೊಣಕೈ ಮತ್ತು ಬೆನ್ನಿನ ಗಾಯಕ್ಕೆ ತುತ್ತಾಗಿ ಸುಮಾರು ಒಂದು ವರ್ಷ ತಂಡದಿಂದ ಹೊರಗುಳಿದಿದ್ದರು. ಈಗ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಮರಳಿದ್ದಾರೆ. ಆದರೆ ಅವರು ಫಿಟ್ನೆಸ್ನಲ್ಲಿ ಸಮಸ್ಯೆ ಆಗಿರುವುದರಿಂದ ಕಳೆದ ಎರಡು ಪಂದ್ಯಗಳನ್ನು ಎಂಐನಲ್ಲಿ ಆರ್ಚರ್ ಆಡಿಲ್ಲ.
ಇದನ್ನೂ ಓದಿ: ಧೋನಿ ನಾಯಕತ್ವದಲ್ಲಿ 200ನೇ IPL ಪಂದ್ಯ: ಗೆಲುವಿನ ಉಡುಗೊರೆ ನೀಡುತ್ತೇವೆ- ಜಡೇಜಾ