ಕೋಲ್ಕತ್ತಾ (ಪಶ್ಚಿಮ ಬಂಗಾಳ) : ಭಾರತದ ಹಿರಿಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ರಾಷ್ಟ್ರೀಯ ತಂಡದ ಆಟಗಾರರು ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುವುದನ್ನು ಕಡ್ಡಾಯಗೊಳಿಸುವ ಮಾರ್ಗದಲ್ಲಿದೆ.
ಈ ಹಿಂದೆ ರಾಷ್ಟ್ರೀಯ ತಂಡದಲ್ಲಿ ಆಡುವ ಟಾಪ್ ಆಟಗಾರರು ರಣಜಿ ಟ್ರೋಫಿಯನ್ನು ಆಡುವುದು ಕಡ್ಡಾಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಟಾಪ್ ಕ್ಲಾಸ್ ಆಟಗಾರರು ಫಾರ್ಮಾ ಕೆಳದುಕೊಂಡಿರುವುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನ್ನು ತಲೆ ಕೆಡಿಸಿದೆ. ಕಾರಣವಿಲ್ಲದೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ಆಟಗಾರರು ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯನ್ನು ಆಡದೇ ದೂರ ಹೋಗುತ್ತಿದ್ದಾರೆ.
ಆದ್ದರಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದೇ ಯಾವುದೇ ಸರಣಿ ಆಡದಿದ್ದರೆ ಅಥವಾ ಬೇರೆ ಯಾವುದೇ ಕಾರ್ಯಯೋಜನೆಗಳನ್ನು ಹೊಂದಿಲ್ಲದಿದ್ದರೆ ರಣಜಿ ಟ್ರೋಫಿಯಲ್ಲಿ ಭಾಗವಹಿಸಬೇಕು. ಯಾವುದೇ ಆಟಗಾರನು ಕಾರಣವಿಲ್ಲದೇ ರಾಜ್ಯವನ್ನು ಪ್ರತಿನಿಧಿಸುವುದನ್ನು ಬಿಟ್ಟು ಬಿಟ್ಟರೆ, ಅವರನ್ನು ಭಾರತ ತಂಡದ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಬುಧವಾರ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.
ಇನ್ನು ಭಾರತ ತಂಡ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇಶಾನ್ ಕಿಶನ್ ಹಾಗೂ ಮತ್ತೊರ್ವ ಆಟಗಾರ ಶ್ರೇಯಸ್ ಅಯ್ಯರ್ ಅವರು ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡದಲ್ಲಿ ಆಡುವುದನ್ನು ನಿಲ್ಲಿಸಿದ್ದಾರೆ. ಕಳೆದ ಏಕದಿನ ವಿಶ್ವಕಪ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಈ ಆಟಗಾರು ಫಾರ್ಮ ಕೆಳದುಕೊಂಡು ತಂಡಕ್ಕೆ ಆಸರೆಯಾಗಿಲ್ಲ. ಇದು ಬಿಸಿಸಿಐ ಮತ್ತು ಆಯ್ಕೆದಾರರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ತವರಿನಲ್ಲಿ ಗುರುವಾರದಿಂದ (ಜ.11) ಪ್ರಾರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧ ಮೂರು ಟಿ 20 ಪಂದ್ಯಗಳ ಸರಣಿಯಿಂದ ಕಿಶನ್ ಮತ್ತು ಅಯ್ಯರ್ ಅವರನ್ನು ಹೊರಗಿಡಲು ಇದು ಕಾರಣವೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಮೂಲಗಳು ನಿರಾಕರಣೆ ಮಾಡಿವೆ.
ಮುಂಬೈ ತಂಡಕ್ಕೆ ಮರಳಿದ ಅಯ್ಯರ್ : ಮತ್ತೊಂದೆಡೆ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ಮರಳಿದ್ದಾರೆ. ಇದೇ ತಿಂಗಳ ಜ. 12 ರಿಂದ 15 ವರೆಗೆ ಮುಂಬೈ ತಂಡವು ಆಂಧ್ರ ಪ್ರದೇಶದ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಕೆಲ ಆಟಗಾರರು ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಅಯ್ಯರ್ ಕ್ರಿಕೆಟ್ ಪೂರ್ವಾಭ್ಯಾಸಕ್ಕೆ ಈ ಟೂರ್ನಿ ಸಹಾಯಕವಾಗಲಿದೆ.
ಇದನ್ನೂ ಓದಿ : ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ?: ಸಾಮರ್ಥ್ಯ ಸಾಬೀತಿಗೆ ಆಫ್ಘನ್ ಸರಣಿ ವೇದಿಕೆ