ಮುಂಬೈ: ದೇಶಿ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕವನ್ನು ಹೆಚ್ಚಿಸುವ ಜೊತೆಗೆ, ಎರಡು ವರ್ಷಗಳ ಹಿಂದೆ ದೇಶಿ ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದ ಆಟಗಾರರಿಗೆ ಕೋವಿಡ್‌ನಿಂದ 2020-21ರ ಆವೃತ್ತಿಯ ಪರಿಹಾರವನ್ನು ಘೋಷಿಸಲಾಗಿದೆ.
ಕೋವಿಡ್ ಕಾರಣದಿಂದ 2020-21ರ ರಣಜಿ ಟ್ರೋಫಿ ಜೊತೆಗೆ ಹಲವು ವಯೋಮಾನದ ಪ್ರಥಮ ದರ್ಜೆ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್ ರದ್ದಾಗಿತ್ತು. ಕೇವಲ ವಿಜಯ್ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಮಾತ್ರ ಆಯೋಜಿಸಲಾಗಿತ್ತು.
'ಡೊಮೆಸ್ಟಿಕ್ ಆಟಗಾರರ ಪಂದ್ಯದ ಶುಲ್ಕವನ್ನು ಹೆಚ್ಚಿಸಿರುವುದನ್ನು ತಿಳಿಸಲು ತುಂಬಾ ಖುಷಿಯಾಗುತ್ತಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
2019-20ರ ದೇಶಿ ಋತುವಿನಲ್ಲಿ ಆಡಿದ್ದ ಆಟಗಾರರು ಕೋವಿಡ್ ಕಾರಣ 2020-21ರ ಆವೃತ್ತಿಯನ್ನು ಕಳೆದುಕೊಂಡಿದ್ದರು. ಅಂತಹ ಆಟಗಾರರಿಗೆ ಹೆಚ್ಚುವರಿ ಶೇ50 ರಷ್ಟನ್ನು ಪಂದ್ಯದ ಶುಲ್ಕದೊಂದಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಪರಿಷ್ಕೃತಗೊಂಡ ಪಂದ್ಯ ಶುಲ್ಕದ ಪ್ರಕಾರ,
1. 40ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಸೀನಿಯರ್ ಕ್ರಿಕೆಟಿಗರು ದಿನವೊಂದಕ್ಕೆ 60,000 ಸಾವಿರ ರೂ ಪಡೆಯಲಿದ್ದಾರೆ. ಇವರು ರಣಜಿ ಪಂದ್ಯವನ್ನಾಡಿದರೆ ಪಂದ್ಯವೊಂದಕ್ಕೆ 2.4 ಲಕ್ಷ ರೂ ಗಳಿಸಲಿದ್ದಾರೆ.
2. 23 ವರ್ಷದ ಒಳಗಿರುವವರಿಗೆ 25,000 ರೂ ಹಾಗೂ 19 ವರ್ಷದೊಳಗಿನ ಕ್ರಿಕೆಟಿಗರು 20,000 ರೂಗಳನ್ನು ಪಡೆಯಲಿದ್ದಾರೆ.
3. ಸೀನಿಯರ್ ವಿಭಾಗದಲ್ಲಿ 21-40 ಪಂದ್ಯಗಳನ್ನು ಆಡಿರುವವರು ಪಂದ್ಯದ ದಿನ 50 ಸಾವಿರ ರೂ ಹಾಗೂ ಅದಕ್ಕಿಂತ ಕಡಿಮೆ ಪಂದ್ಯಗಳನ್ನಾಡಿರುವವರು ದಿನಕ್ಕೆ 40 ಸಾವಿರ ರೂ ಗಳಿಸಲಿದ್ದಾರೆ.
4. 12,500 ರೂ ಪಡೆಯುತ್ತಿದ್ದ ಮಹಿಳಾ ಕ್ರಿಕೆಟಿಗರು ಪಂದ್ಯವೊಂದಕ್ಕೆ 20,000 ರೂ ಪಡೆಯಲಿದ್ದಾರೆ.
5. ಬಿಸಿಸಿಐನಿಂದ ಅಂಡರ್ 16 ನಿಂದ ಸೀನಿಯರ್ ಕ್ರಿಕೆಟಿಗರವರೆಗೆ ಸುಮಾರು 2000 ಕ್ಕೂ ಹೆಚ್ಚು ಕ್ರಿಕೆಟಿಗರು ಈ ಸೌಲಭ್ಯ ಪಡೆಯಲಿದ್ದಾರೆ.
ಈ ಮೊದಲು ಪ್ರಥಮ ದರ್ಜೆ ಕ್ರಿಕೆಟ್ ಆದ ರಣಜಿಯಲ್ಲಿ ಆಟಗಾರರಿಗೆ ಪ್ರತಿದಿನ 35,000 ರೂ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪ್ರತಿ ಪಂದ್ಯದಕ್ಕೆ 17,500 ರೂ ನೀಡಲಾಗುತ್ತಿತ್ತು.
ಇದನ್ನೂ ಓದಿ: 87 ವರ್ಷಗಳ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು