ನವದೆಹಲಿ: ಕ್ರಿಕೆಟ್ನ ಬಹುನಿರೀಕ್ಷಿತ ಟ್ರೋಫಿಯಾದ ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, ಅಕ್ಟೋಬರ್ 5 ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ. ವಿಶ್ವ ಟೂರ್ನಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿ ಕೋರಿತ್ತು. ಆದರೆ, ಇದಕ್ಕೆ ಸರ್ಕಾರ ಸಮ್ಮತಿಸಿಲ್ಲ ಎಂದು ಹೇಳಲಾಗಿದೆ. ಇದರಿಂದ ಬಿಸಿಸಿಐ 963 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. ಹೀಗಾಗಿ ವಿಶ್ವಕಪ್ ಈ ಬಾರಿ ಬಲು ದುಬಾರಿಯಾಗಲಿದೆ.
ಏಕದಿನ ವಿಶ್ವಕಪ್‌ಗೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ತಂಡ ಮತ್ತು ವೇಳಾಪಟ್ಟಿ ಘೋಷಣೆ ಬಾಕಿ ಉಳಿಸಿಕೊಂಡಿದೆ. ವಿಶ್ವಕಪ್ 2023 ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಸಹಜವಾಗಿ ವಿಶ್ವಕಪ್‌ನ ವೇಳಾಪಟ್ಟಿಯನ್ನು 1 ವರ್ಷ ಮುಂಚಿತವಾಗಿಯೇ ಬಿಡುಗಡೆ ಮಾಡುತ್ತದೆ. ಆದರೆ, ಈ ವಿಶ್ವಕಪ್‌ನ ವೇಳಾಪಟ್ಟಿ ಮಾತ್ರ ನಾನಾ ಕಾರಣಗಳಿಂದಾಗಿ ಬಾಕಿ ಉಳಿದುಕೊಂಡಿದೆ.
ದುಬಾರಿ ತೆರಿಗೆ ಪಾವತಿ: ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನು 6 ತಿಂಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಹೀಗಾಗಿ ಬಿಸಿಸಿಐ ಭರದ ಸಿದ್ಧತೆ ನಡೆಸಿದೆ. ಐಸಿಸಿ ವಿಶ್ವಕಪ್ ಅನ್ನು ಅಕ್ಟೋಬರ್ 5 ರಿಂದ ನವೆಂವರ್ವರೆಗೂ ಆಯೋಜಿಸಬಹುದು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಈ ಬಾರಿಯ ವಿಶ್ವಕಪ್ ಆಯೋಜನೆ ತುಂಬಾ ದುಬಾರಿಯಾಗಲಿದೆ. ಕಾರಣ ಇದರ ಆಯೋಜನೆಗೆ ಬಿಸಿಸಿಐ ಭಾರತ ಸರ್ಕಾರಕ್ಕೆ ಭಾರಿ ಮೊತ್ತದ ತೆರಿಗೆಯನ್ನು ಪಾವತಿಸಬೇಕಾಗಿದೆ.
ಅಂದಾಜಿನ ಪ್ರಕಾರ, ಬಿಸಿಸಿಐ ಸರ್ಕಾರಕ್ಕೆ 963 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. ನಂತರವಷ್ಟೇ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ವಿಶ್ವಕಪ್ ಪ್ರಸಾರದಿಂದ ಬಿಸಿಸಿಐ ಸುಮಾರು 4500 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಐಸಿಸಿಯಿಂದಲೂ ಸಿಗದ ವಿನಾಯ್ತಿ: ಯಾವುದೇ ದೇಶಗಳು ಪ್ರಮುಖ ಟೂರ್ನಿ ಆಯೋಜಿಸಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ತೆರಿಗೆ ವಿನಾಯ್ತಿ ಸಿಗುತ್ತದೆ. ಆದರೆ, ಬಿಸಿಸಿಐ ಮತ್ತು ಐಸಿಸಿ ಮಧ್ಯೆ ನಡೆಯುತ್ತಿರುವ ತಿಕ್ಕಾಟದಿಂದಾಗಿ ತೆರಿಗೆ ವಿನಾಯ್ತಿ ಸಿಗುವುದು ಅನುಮಾನವಿದೆ. ಇದಕ್ಕಾಗಿ ಐಸಿಸಿ ಸೆಂಟ್ರಲ್ ಪೂಲ್‌ನಿಂದ ಪಡೆದ ಮೊತ್ತದಲ್ಲಿ ಬಿಸಿಸಿಐ ಸುಮಾರು 200 ಕೋಟಿ ರೂಪಾಯಿ ನಷ್ಟ ಅನುಭವಿಸಬೇಕಾಗಬಹುದು.
ವರದಿಯ ಪ್ರಕಾರ, 2016 ರಿಂದ 2023 ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸೆಂಟ್ರಲ್ ಪೂಲ್‌ನಿಂದ ಸುಮಾರು 3400 ಕೋಟಿ ರೂಪಾಯಿಗಳನ್ನು ಪಡೆಯಬೇಕಿದ್ದು, ಈ ಮೊತ್ತದಿಂದ 200 ಕೋಟಿ ರೂ. ವಿಶ್ವಕಪ್ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ತೆರಿಗೆ ಬಿಕ್ಕಟ್ಟನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ವಿಶ್ವಕಪ್ ವೇಳಾಪಟ್ಟಿಗೆ ಭಾರತ ಸರ್ಕಾರದಿಂದ ಅಗತ್ಯ ಅನುಮತಿ ಪಡೆಯಲು ಬಿಸಿಸಿಐಗಾಗಿ ಕಾಯುತ್ತಿದೆ. ಟೂರ್ನಮೆಂಟ್‌ಗೆ ತೆರಿಗೆ ವಿನಾಯಿತಿ ಮತ್ತು ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲು ವೀಸಾ ಕ್ಲಿಯರೆನ್ಸ್ ಪಡೆಯಬೇಕಿದೆ.
ಇದನ್ನೂ ಓದಿ: ಅಕ್ಬೋಬರ್ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭ; ಅಹಮದಾಬಾದ್‌ನಲ್ಲಿ ಫೈನಲ್-ವರದಿ