ಮುಂಬೈ: ಭಾರತೀಯ ಆಟಗಾರರಿಗೆ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ಆಟಗಾರರ ಆಹಾರದ ಆಯ್ಕೆಯ ವಿಚಾರದಲ್ಲಿ ಬಿಸಿಸಿಐ ಯಾವುದೇ ಪಾತ್ರ ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಆಟಗಾರರ ಫಿಟ್ನೆಸ್ ಕಾಪಾಡುವುದಕ್ಕೆ ಬಿಸಿಸಿಐ ದನದ ಮಾಂಸ ಮತ್ತು ಹಂದಿ ಮಾಂಸವನ್ನು ನಿಷೇಧಿಸಿದ್ದಲ್ಲದೆ, ಹಲಾಲ್ ಮಾಂಸವನ್ನು ಕಡ್ಡಾಯಗೊಳಿಸಿದೆ ಎಂದು ವರದಿಗಳು ಪ್ರಕಟವಾಗಿದ್ದವು. ಆದರೆ ಈ ವರದಿಗಳನ್ನು ಅರುಣ್ ಧುಮಾಲ್ ತಳ್ಳಿಯಾಕಿದ್ದು, ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದು ಆಟಗಾರರ ಆಯ್ಕೆ ಎಂದು ಹೇಳಿದ್ದಾರೆ.
"ಆಹಾರದ ಯೋಜನೆಯಲ್ಲಿ ಆಟಗಾರರಿಗೆ ಬಿಸಿಸಿಐನಿಂದ ಯಾವುದೇ ನಿರ್ದೇಶನ ನೀಡಿಲ್ಲ ಮತ್ತು ಅಂತಹ ಯಾವುದೇ ವಿಷಯವನ್ನು ನಮ್ಮ ಅಧಿಕಾರಿಗಳು ಇದುವರೆಗೆ ಚರ್ಚಿಸಿಲ್ಲ ಮತ್ತು ಇದನ್ನೇ ತಿನ್ನಬೇಕೆಂದು ಆಥವಾ ತಿನ್ನಬಾರದು ಎಂದು ಒತ್ತಾಯ ಮಾಡಿಲ್ಲ. ನನಗೆ ತಿಳಿದ ಮಾಹಿತಿಯ ಪ್ರಕಾರ ಆಟಗಾರರಿಗೆ ಆಹಾರ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಮಾರ್ಗಸೂಚಿಗಳನ್ನು ನಾವು ನೀಡಿಲ್ಲ. ಆಹಾರದ ಆಯ್ಕೆ ಆಟಗಾರರ ವೈಯಕ್ತಿಕವಾಗಿದೆ, ಬಿಸಿಸಿಐ ಇದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ" ಎಂದು ಧುಮಾಲ್ ಹೇಳಿದ್ದಾರೆ.
ಬಿಸಿಸಿಐ ತನ್ನ ಯಾವುದೇ ಆಟಗಾರರಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಯಾವುದೇ ಸಲಹೆ ನೀಡುವುದಿಲ್ಲ. ಆಟಗಾರರು ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಅವರು ಸಸ್ಯಾಹಾರ ಆಗಲಿ ಅಥವಾ ಮಾಂಸಾಹಾರ ಯಾವುದೇ ಆದರೂ, ಅದು ಅವರ ಆಯ್ಕೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತೀಯ ಆಟಗಾರರಿಗೆ ಹಲಾಲ್ ಮಾಂಸ ಕಡ್ಡಾಯಗೊಳಿಸಿ ಬಿಕ್ಕಟ್ಟಿಗೆ ಸಿಲುಕಿದ ಬಿಸಿಸಿಐ