ಢಾಕಾ(ಬಾಂಗ್ಲಾದೇಶ): ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಇಂದು ಬೆಳಗ್ಗೆ 11.30ಕ್ಕೆ ನಡೆಯಲಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾ ಒಂದು ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ವಿಫಲ ಕಂಡ ರೋಹಿತ್ ಶರ್ಮಾ ಪಡೆ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. 2015ರಲ್ಲಿ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ 1-2 ರಿಂದ ಅಂತರದಿಂದ ಸೋಲು ಕಂಡಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಗೆದ್ದು ನಿಟ್ಟುಸಿರುಬಿಟ್ಟಿತ್ತು.
ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾ ಸ್ಪಿನ್ನರ್‌ಗಳಾದ ಶಕೀಬ್ ಅಲ್ ಹಸನ್ ಮತ್ತು ಮೆಹದಿ ಹಸನ್ ಮಿರಾಜ್ ಮತ್ತೊಮ್ಮೆ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಪ್ಲಾನ್ ಮಾಡುತ್ತಿದ್ದಾರೆ. ಭಾರತೀಯ ಆಟಗಾರರ ಆಟದ ಶೈಲಿಯ ಬಗ್ಗೆ ಕೆಲ ದಿನಗಳಿಂದಲೂ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಲೇ ಇದೆ. ಪರಿಸ್ಥಿತಿಗೆ ತಕ್ಕಂತೆ ಆಟ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ.
ಈ ಸರಣಿಯಲ್ಲಿ ಶುಭಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರಿಗೂ ವಿಶ್ರಾಂತಿ ನೀಡುವ ಹಿಂದಿನ ಆಯ್ಕೆ ಸಮಿತಿಯ ನಿರ್ಧಾರವೂ ಕೂಡಾ ಟೀಕೆಗೊಳಪಟ್ಟಿದೆ. ನ್ಯೂಜಿಲೆಂಡ್ ಪ್ರವಾಸದಿಂದಾಗಿ ಬಾಂಗ್ಲಾ ಸರಣಿಗೆ ಹೊಸ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ತಂಡದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಚೇತನ್ ಶರ್ಮಾ ಹೇಳಿದ್ದರು. ಆದರೆ, ಶುಭಮನ್ ಗಿಲ್ ಅವರಿಗೆ ಟಿ20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ತಂಡದಲ್ಲಿದ್ದರೂ ಆಡಲು ಅವಕಾಶಕ್ಕೆ ಸಿಕ್ಕಿರಲಿಲ್ಲ. ಆದರೂ, ಬಾಂಗ್ಲಾ ಸರಣಿಯಿಂದ ಅವರನ್ನು ಹೊರಗಿಟ್ಟಿದ್ದು ದಿಗ್ಭ್ರಮೆ ಮೂಡಿಸುವಂತಿದೆ.
ತಂಡಗಳು ಹೀಗಿವೆ..: ಭಾರತ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್.
ಬಾಂಗ್ಲಾದೇಶ: ಲಿಟ್ಟನ್ ದಾಸ್, ಅನಾಮುಲ್ ಹೇಗ್ ಬಿಜೋಯ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಯಾಸಿರ್ ಆಲ್ ಚೌಧರಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಎಬಾಡೋತ್ ಹುಸೇನ್ ಅಹ್ಮದ್, ನಶ್ಮುದ್ ಹುಸೇನ್ ಅಹ್ಮದ್, ಮಹ್ಸಮುದ್ ಷಾನ್ ಉಹ್ಮದ್, ಕ್ವಾಜಿ ನೂರುಲ್ ಹಸನ್ ಸೋಹನ್, ಶೋರಿಫುಲ್ ಇಸ್ಲಾಂ.
ಓದಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಹೃಷಿಕೇಶ್ ಕಾನಿಟ್ಕರ್ ನೇಮಕ