ಚಿತ್ತಗಾಂತ್(ಬಾಂಗ್ಲಾದೇಶ): ಏಕದಿನ ಸರಣಿ ಸೋತಿರುವ ಭಾರತಕ್ಕೆ ಇಂದಿನಿಂದ ಟೆಸ್ಟ್ನಲ್ಲಿ ಪರೀಕ್ಷೆ ನಡೆಯಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿರುವ ರಾಹುಲ್ ಪಡೆಗೆ ಬೃಹತ್ ಮೊತ್ತ ಕಲೆಹಾಕುವ ಅಗತ್ಯ ಇದೆ. ದೇಶಿ ನೆಲದ ಲಾಭವನ್ನು ಬಾಂಗ್ಲಾಕ್ಕೆ ಭಾರತ ಬಿಟ್ಟು ಕೊಡದ ರೀತಿಯಲ್ಲಿ ಬ್ಯಾಟ್ ಬೀಸಬೇಕಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಸ್ಥಾನ ಪಡೆಯಲು ಸರಣಿಗೆಲ್ಲುವ ಅಗತ್ಯ ಇದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಭಾರತ ಈ ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿ ಬಲಿಷ್ಠತೆ ಮೆರೆಯಬೇಕಿದೆ.
ರೋಹಿತ್ ಶರ್ಮಾ ಗಾಯಗೊಂಡಿರುವ ಹಿನ್ನೆಲೆ ಕೆ ಎಲ್ ರಾಹುಲ್ಗೆ ನಾಯಕತ್ವ ದೊರೆತಿದೆ. ಹಿಟ್ ಮ್ಯಾನ್ ಬದಲಾಗಿ ಅಭಿಮನ್ಯು ಈಶ್ವರನ್ ತಂಡ ಸೇರಿದರೂ ಆಡುವ 11ರಲ್ಲಿ ಸ್ಥಾನ ಸಿಕ್ಕಿಲ್ಲ. ನಾಯಕ ರಾಹುಲ್ ಬಹುತೇಕ ಹಳೆ ತಂಡವನ್ನೇ ಕಣಕ್ಕೆ ಇಳಿಸಿದ್ದಾರೆ.
ಅಕ್ಷರ್, ಅಶ್ವನ್ ಮತ್ತು ಕುಲ್ದೀಪ್ ಅವರು ಸ್ಪಿನ್ ವಿಭಾಗದಲ್ಲಿದ್ದರೆ, ಉಮೇಶ್ ಮತ್ತು ಸಿರಾಜ್ ವೇಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಗಿಲ್ ಮತ್ತು ರಾಹುಲ್(ನಾಯಕ) ಆರಂಭಿಕರಾಗಿ ಕಣಕ್ಕೆ ಬಂದರೆ ಮಧ್ಯಮ ಕ್ರಮಾಂಕದಲ್ಲಿ ಪೂಜಾರ, ಕೊಹ್ಲಿ, ಅಯ್ಯರ್ ಮತ್ತು ಪಂತ್ ಬಲ ಭಾರತಕ್ಕಿದೆ.
ಬಾಂಗ್ಲಾಕ್ಕೆ 101 ಆಟಗಾರನಾಗಿ ಆರಂಭಿಕ ಜಾಕಿರ್ ಹಸನ್ ಈ ಪಂದ್ಯದಿಂದ ಪಾದಾರ್ಪಣೆ ಮಾಡಿದ್ದಾರೆ. ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ ಮತ್ತು ನೂರುಲ್ ಹಸನ್ ಬಾಂಗ್ಲಾಕ್ಕೆ ಬ್ಯಾಟಿಂಗ್ ಬಲವಾಗಿದ್ದಾರೆ. ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್ ಮತ್ತು ಎಬಾಡೋತ್ ಹೊಸೈನ್ ಬೌಲರ್ಗಳಾಗಿ ಪಾತ್ರ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: IPL 2023: ಡಿ.23ಕ್ಕೆ ಹರಾಜು ಪ್ರಕ್ರಿಯೆ.. 405 ಆಟಗಾರರ ಪಟ್ಟಿ ಅಂತಿಮ