ಚತ್ತೋಗ್ರಾಮ್; ರಹ್ಮನುಲ್ಲಾ ಗುರ್ಬಜ್ ಅವರ ಅಜೇಯ ಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿ ಸರಣಿಯ ಕೊನೆಯ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸುವ ಮೂಲಕ ವೈಟ್ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿದೆ.
ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಭಾಗವಾಗಿ ನಡೆದ ಸರಣಿಯಲ್ಲಿ ಈಗಾಗಲೇ ಬಾಂಗ್ಲಾದೇಶ ಸರಣಿಯನ್ನು ಗೆದ್ದುಕೊಂಡಿದೆ. ಹಾಗಾಗಿ ಇಂದಿನ ಪಂದ್ಯ ಔಪಚಾರಿಕ ಪಂದ್ಯವಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಅಫ್ಘಾನ್ ಬೌಲಿಂಗ್ ದಾಳಿಗೆ ತತ್ತರಿಸಿ 46.5 ಓವರ್ಗಳಲ್ಲಿ 192 ರನ್ಗಳಿಗೆ ಆಲೌಟ್ ಆಗಿತ್ತು. ಅದ್ಭುತ ಫಾರ್ಮ್ನಲ್ಲಿರುವ ಲಿಟನ್ ದಾಸ್ 113 ಎಸೆತಗಳಲ್ಲಿ 7 ಬೌಂಡರಿ ಸಹಿತ 86 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶಕಿಬ್ ಅಲ್ ಹಸನ್ 36 ಎಸೆತಗಳಲ್ಲಿ 30, ತಮೀಮ್ ಇಕ್ಬಾಲ್ 11ರನ್, ಮಹ್ಮುದುಲ್ಲಾ ಅಜೇಯ 29 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಎರಡಂಕಿ ಮೊತ್ತವನ್ನು ದಾಟಲಿಲ್ಲ.
ಅಫ್ಘಾನ್ ಪರ ರಶೀದ್ ಖಾನ್ 37ಕ್ಕೆ 3, ಮೊಹಮ್ಮದ್ ನಬಿ 29ಕ್ಕೆ 2, ಅಜ್ಮತುಲ್ಲಾ ಒಮಾರ್ಝೈ 29ಕ್ಕೆ1, ಫಜಲ್ಹಾಕ್ ಫರೂಕಿ 33ಕ್ಕೆ1 ವಿಕೆಟ್ ಪಡೆದರು.
193 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 40.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಗುರ್ಬಜ್ 110 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 106 ರನ್ಗಳಿಸಿ ಗೆಲುವಿನ ರೂವಾರಿಯಾದರು. ಇವರಿಗೆ ತಕ್ಕ ಸಾಥ್ ನೀಡಿದ ರಿಯಾಜ್ ಹಸನ್ 35, ರಹ್ಮತ್ ಶಾ 47ರನ್ ಗಳಿಸಿದರು.
ಎರಡು ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿ ಮಾರ್ಚ್ 3ರಿಂದ ಆರಂಭವಾಗಲಿದೆ.
ಇದನ್ನೂ ಓದಿ: 3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!