ಮುಂಬೈ: ಆಸ್ಟ್ರೇಲಿಯಾ ತಂಡ ಆಲ್ರೌಂಡರ್ ಮಿಚೆಲ್ ಮಾರ್ಷ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳದೇ ಇರುವುದರಿಂದ ಮುಂದಿನ ಮೂರು ಅಥವಾ ನಾಲ್ಕು ಪಂದ್ಯಗಳಿಂದ ಹೊರಗುಳಿಯಲಿದ್ದು, ಇದು ಡೆಲ್ಲಿ ಕ್ಯಾಪಿಟಲ್ಸ್ಗೆ ಹಿನ್ನಡೆಯನ್ನುಂಟು ಮಾಡಿದೆ.
ಮಿಚೆಲ್ ಮಾರ್ಷ್ ಮೆಗಾ ಹರಾಜಿನಲ್ಲಿ 6.50 ಕೋಟಿರೂಗಳಿಗೆ ಕ್ಯಾಪಿಟಲ್ಸ್ ಸೇರಿದ್ದರು. ಆದರೆ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದರು. ಡೆಲ್ಲಿಗೆ ಆರಂಭದಲ್ಲಿ ಅವರ ಬದಲೂ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಇತ್ತು, ಆದರೆ ಫ್ರಾಂಚೈಸಿ ಅವರನ್ನೇ ಗಾಯದಿಂದ ಚೇತರಿಸಿಕೊಂಡ ನಂತರ ತಂಡದಲ್ಲಿ ಆಡಿಸಲು ಬಯಸಿ ಕಾಯುತ್ತಿತ್ತು. ಇದೀಗ ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ಕ್ಯಾಪಿಟಲ್ಸ್ ಕಾಯುವಿಕೆ ಮುಂದುವರಿದಿದೆ.
ಏಪ್ರಿಲ್ 10ರಂದು ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಕೋಚ್ ರಿಕಿ ಪಾಂಟಿಂಗ್ ಅವರು ಮಾರ್ಷ್ ಮರಳುವಿಕೆಯ ಬಗ್ಗೆ ತಿಳಿಸಿದ್ದರು. ಆದರೆ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಆಸೀಸ್ ಆಲ್ರೌಂಡರ್ಗೆ ಕೆಲವು ದಿನಗಳ ಅಗತ್ಯವಿದೆ. ಹಾಗಾಗಿ ಡಿಸಿ ತಂಡ ಮಾರ್ಷ್ರನ್ನು ಮತ್ತೆ 3-4 ಪಂದ್ಯಗಳಲ್ಲಿ ಮಿಸ್ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಿಶ್ರ ಫಲಿತಾಂಶ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ಪಂತ್ ಬಳಗ, ನಂತರ 2 ಪಂದ್ಯಗಳಲ್ಲಿ ಸೋಲು ಕಂಡಿತ್ತು, ಆದರೆ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿ ಗೆಲುವು ಸಾಧಿಸಿದೆ. ಒಂದು ವೇಳೆ ಮಾರ್ಷ್ ತಂಡಕ್ಕೆ ಆಗಮಿಸಿದರೆ ರೋವ್ಮನ್ ಪೊವೆಲ್ ಜಾಗ ಬಿಡಬೇಕಾಗುತ್ತದೆ.
ಇದನ್ನೂ ಓದಿ:ನಿವೃತ್ತಿಯಾದ್ರೂ ಕುಗ್ಗದ ಧೋನಿ ಬ್ರ್ಯಾಂಡ್ ಮೌಲ್ಯ: ಜಾಹೀರಾತು ಒಪ್ಪಂದಗಳಿಂದ್ಲೇ ₹150 ಕೋಟಿ ಆದಾಯ!