ಕರಾಚಿ : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಕೊನೆಯ ದಿನ ಪಾಕಿಸ್ತಾನ ಗೆಲ್ಲಲು 314 ರನ್‌ಗಳ ಅಗತ್ಯವಿದ್ದರೆ,ಇತ್ತ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್ಗಳ ಅಗತ್ಯವಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 556/9 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡರೆ, ಪಾಕಿಸ್ತಾನವನ್ನು 148 ರನ್ಗಳಿಗೆ ಆಲೌಟ್ ಮಾಡಿ ಬರೋಬ್ಬರಿ 408 ರನ್‌ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು.
ಆದರೆ, ಬೃಹತ್ ಮುನ್ನಡೆಯ ಹೊರತಾಗಿಯೂ ಫಾಲೋ ಆನ್ ಹೇರದೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಆದರೆ, ಇದೇ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.
408ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 97/2ಕ್ಕೆ ಡಿಕ್ಲೇರ್ ಘೋಷಿಸಿ ಪಾಕಿಸ್ತಾನಕ್ಕೆ 506 ರನ್‌ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿರುವ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 192 ರನ್ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.
ನಾಯಕ ಬಾಬರ್ ಅಜಮ್ 102 ಮತ್ತು ಅಬ್ದುಲ್ಲಾ ಶಫೀಕ್ 71 ರನ್ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. 21ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಈ ಜೋಡಿ ಬರೋಬ್ಬರಿ 171 ರನ್ ಸೇರಿಸಿದೆ.
ನಾಳೆ ಟೆಸ್ಟ್ನ ಅಂತಿಮ ದಿನವಾಗಿದ್ದು, ಎರಡೂ ತಂಡಕ್ಕೂ ಗೆಲುವಿನ ಅವಕಾಶವಿದೆ. ಪಾಕಿಸ್ತಾನ ಗೆಲ್ಲಲು 90 ಓವರ್ಗಳಲ್ಲಿ 314 ರನ್ಗಳಿಸಬೇಕಾಗಿದೆ. ಆಸ್ಟ್ರೇಲಿಯಾ ಅಷ್ಟೇ ಓವರ್ಗಳಲ್ಲಿ 8 ವಿಕೆಟ್ ಪಡೆಯಬೇಕಿದೆ.
ಇದನ್ನೂ ಓದಿ:ಐಪಿಎಲ್ಗೆ ಸ್ಪರ್ಧೆಯೊಡ್ಡಲು ಪಿಎಸ್ಎಲ್ನಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇನೆ : ರಮೀಜ್ ರಾಜಾ