ದುಬೈ (ಯುಎಇ): ಇದೇ 27 ರಿಂದ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದೆ. ಇದುವರೆಗೂ ಏಕದಿನ ಮಾದರಿಯಲ್ಲಿ ನಡೆಯುತ್ತಿದ್ದ ಟೂರ್ನಿ ಈ ಬಾರಿ ಟಿ - 20 ಮಾದರಿಯಲ್ಲಿ ನಡೆಯಲಿದೆ. 2018 ರಲ್ಲಿ ಒಮ್ಮೆ ಚುಟಕು ಕ್ರಿಕೆಟ್ ಆಗಿ ಟೂರ್ನಿ ಆಡಿಸಲಾಗಿತ್ತು.
ಇತ್ತೀಚೆಗಷ್ಟೇ ಐಪಿಎಲ್ ಮುಗಿದಿದ್ದು, ಮತ್ತೊಂದು ಕ್ರಿಕೆಟ್ ರಸದೌತಣಕ್ಕೆ ಯುಎಇ ವೇದಿಕೆಯಾಗಲಿದೆ. ಈ ಬಾರಿ 6 ತಂಡಗಳು ಕಪ್ಗಾಗಿ ಸೆಣಸಾಡಲಿವೆ. ಏಷ್ಯಾ ಕಪ್ ಟೂರ್ನಿ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್ಗೆ ಪೂರ್ವ ತಯಾರಿಯಾಗಲಿದ್ದು, ಏಷ್ಯಾ ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾಗೆ ನೆರವಾಗಲಿದೆ.
ಲಯದ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ತಮ್ಮ ಹಳೆಯ ಖದರ್ ತೋರಿಸಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಜೊತೆಗೆ ಬ್ಯಾಟಿಂಗ್ನಲ್ಲಿ ಮಿಂಚುತ್ತಿರುವ ಪಾಕಿಸ್ತಾನದ ಬಾಬರ್ ಅಜಮ್ ಕಮಾಲ್ ಮುಂದುವರಿಸುವ ಇರಾದೆಯಲ್ಲಿದ್ದರೆ, ಶ್ರೀಲಂಕಾದ ಹೊಸ ಸ್ಪಿನ್ ಪ್ರತಿಭೆ ಹಸರಂಗ, ಆಫ್ಘನ್ನ ರಶೀದ್, ಬಾಂಗ್ಲಾದ ಶಕೀಬ್ ತಮ್ಮ ಕರಾಮತ್ತು ತೋರಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಪಾಕ್ನ ಆಜಮ್ ಮೇಲೆ ಗಮನ: ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಆಜಂ ಟೂರ್ನಿಯಲ್ಲಿ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿ ತಂಡಕ್ಕೆ ನೆರವಾಗಬೇಕಿದೆ. ಈಗಾಗಲೇ ತಂಡದ ಪ್ರಮುಖ ವೇಗಿ ಶಾಹೀನ್ ಆಫ್ರಿದಿ ಗಾಯಗೊಂಡಿರುವುದು ಭಾರೀ ಹಿನ್ನಡೆ ಉಂಟು ಮಾಡಿದೆ.
2021 ರ ಟಿ-20 ವಿಶ್ವಕಪ್‌ನ ಬಾರತದೆದುರಿನ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಜಯ ಸಾಧಿಸಿದಾಗ ಆಜಂ ಅಜೇಯ 68 ರನ್ ಗಳಿಸಿ ಅಬ್ಬರಿಸಿದ್ದರು. ಟೂರ್ನಿಯಲ್ಲಿ ಭಾರತದೆದುರು ಭಾನುವಾರ ನಡೆಯುವ ಪಂದ್ಯದಲ್ಲೂ ಮಿಂಚುವ ಉತ್ಸಾಹದಲ್ಲಿದ್ದಾರೆ.
ಹಳೆಯ ಖದರ್ಗೆ ಮರಳ್ತಾರಾ ಕೊಹ್ಲಿ: ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದು, ತಮ್ಮ ಹಳೆಯ ಖದರ್ ತೋರಿಸುವ ನಿರೀಕ್ಷೆಯಲ್ಲಿದ್ದಾರೆ. ಶತಕವಿಲ್ಲದೇ ಸಾವಿರಕ್ಕೂ ಅಧಿಕ ದಿನ ಮುಗಿಸಿರುವ ಕೊಹ್ಲಿ ಏಷ್ಯಾಕಪ್ನಲ್ಲಿ ಆ ಬರವನ್ನು ನೀಗಿಸಿಕೊಳ್ಳಲಿದ್ದಾರಾ ಎಂಬುದು ಪ್ರಶ್ನೆಯಾಗಿದೆ.
ಇನ್ನು ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದು, ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮುಂದಿನ ಪಂದ್ಯಗಳಲ್ಲಿ ಎಲ್ಲರ ಟೀಕೆಗೆ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.
ಹಸರಂಗ ಸ್ಪಿನ್ ಕಮಾಲ್: ಶ್ರೀಲಂಕಾ ತಂಡ ಸ್ಪಿನ್ ಆಟಗಾರರಿಗೆ ಹೆಸರುವಾಸಿ. ಹೊಸ ಪ್ರತಿಭೆ ವನಿಂದು ಹಸರಂಗ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿರುವ ಹಸರಂಗ ಸಹ ಸ್ಪಿನ್ನರ್‌ಗಳಾದ ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ ಮತ್ತು ಪ್ರವೀಣ್ ಜಯವಿಕ್ರಮ ಅವರ ಜೊತೆಗೂಡಿ ಯುಎಇಯ ನಿಧಾನಗತಿ ಪಿಚ್ಗಳಲ್ಲಿ ಮಿಂಚು ಹರಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಶಕೀಬ್ ಕ್ಯಾಪ್ಟನ್ ಆಗಿ ವಾಪಸ್: ಬಾಂಗ್ಲಾದೇಶ ತಂಡದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಸುದ್ದಿಯಲ್ಲಿದ್ದಾರೆ. ಆದರೂ ಸ್ಥಿರ ಪ್ರದರ್ಶನ ನೀಡುತ್ತಿರುವ ಬಾಂಗ್ಲಾ ಆಟಗಾರನಿಗೆ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಮತ್ತು ಸ್ಪಿನ್ನರ್ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದ ಮೂಲಕ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ. ಇದು ಅವರ 100ನೇ ಟಿ- 20 ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಸ್ಪಿನ್ ಕಿಂಗ್ ರಶೀದ್: ಅಫ್ಘಾನಿಸ್ತಾನದ ಸ್ಟಾರ್ ಪ್ಲೇಯರ್, ಲೆಗ್ ಸ್ಪಿನ್ನರ್ ರಶೀದ್ ಖಾನ್ ಸ್ಪಿನ್ ಲೋಕದ ಹೊಸ ಮಾಂತ್ರಿಕ. ಐಪಿಎಲ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ರಶೀದ್ ಏಷ್ಯಾ ಕಪ್ನಲ್ಲಿ ಹೊಸ ಮೈಲಿಗಲ್ಲು ನೆಡಲು ಮುಂದಾಗಿದ್ದಾರೆ. 66 ಅಂತಾರಾಷ್ಟ್ರೀಯ ಟಿ-ಟ್ವೆಂಟಿ ಪಂದ್ಯಗಳಲ್ಲಿ 112 ವಿಕೆಟ್‌ಗಳನ್ನು ಕಬಳಿಸಿರುವ ಸ್ಪಿನ್ನರ್ ತಂಡದ ಪ್ರಮುಖ ಆಟಗಾರ. ಐಪಿಎಲ್ ಮತ್ತು ದಿ ಹಂಡ್ರೆಡ್ ಸೇರಿದಂತೆ ಜಾಗತಿಕ ಟಿ-20 ಲೀಗ್‌ಗಳಲ್ಲಿ ವಿಕೆಟ್ ಟೇಕಿಂಗ್ ಸಾಮರ್ಥ್ಯ ಮತ್ತು ಆಕ್ರಮಣಕಾರಿ ಕೆಳ ಕ್ರಮಾಂಕದ ಬ್ಯಾಟಿಂಗ್‌ನಿಂದ ದೊಡ್ಡ ಯಶಸ್ಸು ಪಡೆದಿದ್ದಾರೆ.
ಓದಿ: ಬಿಸಿಸಿಐ ಪದಾಧಿಕಾರಿಗಳ ಅಧಿಕಾರವಧಿ ವಿಸ್ತರಣೆ ಅರ್ಜಿ.. ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್