ಮೆಲ್ಬೋರ್ನ್: ಸೆಪ್ಟೆಂಬರ್ ವೇಳೆಗೆ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದ ಜೊತೆ ಆಸ್ಟ್ರೇಲಿಯಾ ತಂಡ ತ್ರಿಕೋನ ಸರಣಿ ಆಯೋಜನೆಯಾದರೆ ನಮ್ಮ ತಂಡದ ಆಟಗಾರರು ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ತ್ಯಜಿಸುತ್ತಾರೆಂಬ ನಿರೀಕ್ಷೆಯಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಟ್ರೆವರ್ ಹಾನ್ಸ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ಪ್ರವಾಸಕ್ಕಾಗಿ 18 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಮಂಗಳವಾರ ಘೋಷಿಸಿದೆ. ಈ ಪ್ರವಾಸಕ್ಕೆ ಸ್ಮಿತ್, ವಾರ್ನರ್ ಮತ್ತು ಮ್ಯಾಕ್ಸ್ವೆಲ್ ಸೇರಿದಂತೆ ಕೆಲವು ಐಪಿಎಲ್ ಬೌಂಡ್ ಆಟಗಾರರು ತಂಡದಿಂದ ಹೊರಗುಳಿದಿದ್ದಾರೆ. ಆದರೆ, ಕ್ರಿಕೆಟ್ ಮಂಡಳಿ ಸೆಪ್ಟೆಂಬರ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದೊಂದಿಗಿನ ತ್ರಿಕೋನ ಸರಣಿ ಆರಂಭಿಸಲು ಚಿಂತಿಸುತ್ತಿದೆ. ಒಂದು ವೇಳೆ ಇದು ಜರುಗಿದರೆ ನಮ್ಮ ಆಟಗಾರರು ಐಪಿಎಲ್ ತ್ಯಜಿಸಿ ರಾಷ್ಟ್ರೀಯ ತಂಡದೊಂದಿಗೆ ಇರಲಿದ್ದಾರೆ ಎಂಬ ಭರವಸೆಯಿದೆ ಎಂದು ಟ್ರೆವರ್ ತಿಳಿಸಿದ್ದಾರೆ.
ಸೆಪ್ಟೆಂಬರ್ 19ರಿಂದ ದ್ವಿತೀಯಾರ್ಧದ ಐಪಿಎಲ್ಅನ್ನು ಬಿಸಿಸಿಐ ಯುಎಇನಲ್ಲಿ ಆಯೋಜಿಸಲಿದೆ. ಆದರೆ, ಇದಕ್ಕಾಗಿ ಈಗಾಗಲೇ ಇಂಗ್ಲೆಂಡ್ ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ. ಒಂದು ವೇಳೆ, ಆ ಸಮಯದಲ್ಲಿ ತ್ರಿಕೋನ ಸರಣಿ ಆಯೋಜನೆಗೊಂಡರೆ ಆಸ್ಟ್ರೇಲಿಯಾ ಕ್ರಿಕೆಟಿಗರು ಕೂಡ ರಾಷ್ಟ್ರೀಯ ತಂಡದ ಸೇವೆಗಾಗಿ ಐಪಿಎಲ್ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಟ್ರೆವರ್ ಪರೋಕ್ಷವಾಗಿ ತಿಳಿಸಿದ್ದಾರೆ.
ಆದರೆ, ನಮ್ಮ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಐಪಿಎಲ್ ತೊರೆಯುತ್ತಾರೆ ಎಂದು ನಾನು ಖಂಡಿತವಾಗಿ ನಿರೀಕ್ಷಿಸುತ್ತೇನೆ ಎಂದಿರುವ ಅವರು, ಇದು ಖಂಡಿತವಾಗಿಯೂ ಅವರ ಬದ್ಧತೆಗಳ ಮೇಲೆ ಅವಲಂಬಿಸಿರುತ್ತದೆ. ಆ ಸಮಯದಲ್ಲಿ ಅವರ ಆಸ್ಟ್ರೇಲಿಯಾದ ಬದ್ಧತೆಗಳಿಗೆ ಬದ್ಧರಾಗುತ್ತಾರೆಂಬ ನಿರೀಕ್ಷೆಯಿದೆ. ಆದರೆ, ಈಗಲೇ ಅದರ ಕಡೆ ನಮ್ಮ ಗಮನವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ:ಐಪಿಎಲ್ ವೇಳೆ ರೋಹಿತ್ಗೆ ಬೆದರಿಕೆಯೊಡ್ಡಿದ್ದಾರಂತೆ ಬೌಲ್ಟ್