ದುಬೈ : ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದ ಭಾರತೀಯ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೆಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಧರ್ಮವನ್ನು ಮಧ್ಯೆ ತಂದು ಕೆಟ್ಟದಾಗಿ ಟೀಕಿಸಿದ್ದರು.
ಈ ಕುರಿತು ಮಾತನಾಡಿರುವ ನಾಯಕ ವಿರಾಟ್ ಕೊಹ್ಲಿ, ಧರ್ಮದ ಆಧಾರದ ಮೇಲೆ ವ್ಯಕ್ತಿಯನ್ನು ನಿಂದಿಸುವುದು ಶೋಚನೀಯ ಸಂಗತಿ. ಆ ರೀತಿಯ ಮನಸ್ಥಿತಿಯುಳ್ಳ ಜನರ ಬಗ್ಗೆ ಮಾತನಾಡಿ ನನ್ನ ಒಂದು ನಿಮಿಷವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಭಾನುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೂಪರ್ 12ನಲ್ಲಿ ಎದುರಾಗುತ್ತಿವೆ. ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೋಲು ಕಂಡಿದ್ದು, ಸೆಮಿಫೈನಲ್ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಒಂದು ರೀತಿಯ ಕ್ವಾರ್ಟರ್ ಫೈನಲ್ ಪಂದ್ಯವಾಗಲಿದೆ.
ಇದನ್ನು ಓದಿ:ಮೊಹಮ್ಮದ್ ಶಮಿ ವಿಶ್ವದ ಸ್ಟಾರ್ ಬೌಲರ್, ನಿಮ್ಮ ಆಟಗಾರರನ್ನು ನೀವು ಗೌರವಿಸಿ: ಮೊಹಮ್ಮದ್ ರಿಜ್ವಾನ್
ನನ್ನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯನ್ನು ಆತನ ಧರ್ಮದ ಆಧಾರದ ಮೇಲೆ ದಾಳಿ ಮಾಡುವುದು ಅತ್ಯಂತ ಹೀನಕೃತ್ಯ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರಿಗೂ ಅವರಿಗೆ ಅಭಿಪ್ರಾಯವನ್ನ ವ್ಯಕ್ತಪಡಿಸುವ ಹಕ್ಕಿದೆ.
ಆದರೆ, ಯಾವುದೇ ಒಬ್ಬ ವ್ಯಕ್ತಿಯನ್ನ ಅವರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದರ ಬಗ್ಗೆ ನಾನು ಆಲೋಚನೆ ಕೂಡ ಮಾಡುವುದಿಲ್ಲ ಎಂದು ಕೊಹ್ಲಿ ಕಿವೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಮಾತು ಮುಂದುವರಿಸಿ, ಮೊಹಮ್ಮದ್ ಶಮಿ ಅವರು ಭಾರತಕ್ಕೆ ತಮ್ಮ ಬೌಲಿಂಗ್ ಮೂಲಕ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವುದನ್ನು ಅರ್ಥಮಾಡಿಕೊಳ್ಳದೇ ತಮ್ಮ ಹತಾಷೆಯನ್ನು ಟೀಕಿಸುವುದರ ಮೂಲಕ ಕೆಟ್ಟ ರೀತಿಯಲ್ಲಿ ಹೊರ ಹಾಕಿದ್ದಾರೆ.
ಅಂತಹ ವ್ಯಕ್ತಿಯ ಬಗ್ಗೆ ವಿವೇಕಹೀನವಾಗಿ ಕಾಣುವ ಹಾಗೂ ಅವರ ದೇಶಪ್ರೇಮ, ಪ್ರಾಮಾಣಿಕತೆಯನ್ನು ಕಡೆಗಣಿಸುವಂತಹ ವ್ಯಕ್ತಿಗಳ ಬಗ್ಗೆ ನನ್ನ ಜೀವನದ ಒಂದೂ ನಿಮಿಷವನ್ನು ವ್ಯರ್ಥ ಮಾಡಕೊಳ್ಳಲು ನಾನು ಬಯಸುವುದಿಲ್ಲ.
ನಾವೆಲ್ಲರೂ ಶಮಿ ಬೆನ್ನಿಗೆ ಇದ್ದೇವೆ. ಅವರನ್ನು ಶೇ.200ರಷ್ಟು ಬೆಂಬಲಿಸುತ್ತೇವೆ. ಇಂತಹ ಹೀನ ಮನಸ್ಥಿತಿಯುಳ್ಳವರ ಟೀಕೆಯಿಂದ ನಮ್ಮ ಸಹೋದರತ್ವಕ್ಕೆ ಕಿಂಚಿತ್ತು ಹಾನಿಯಾಗುವುದಿಲ್ಲ ಎಂದು ವಿರಾಟ್ ಕಿಡಿಕಾರಿದ್ದಾರೆ.
ಶಮಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 3.5 ಓವರ್ಗಳಲ್ಲಿ ವಿಕೆಟ್ ಇಲ್ಲದೆ 43 ರನ್ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಭಾರತ ನೀಡಿದ್ದ 152 ರನ್ಗಳ ಗುರಿಯನ್ನು ಪಾಕಿಸ್ತಾನ 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತ್ತು.
ಇದನ್ನು ಓದಿ:ಶಾಹೀನ್ ಅಫ್ರಿದಿಯಂತೆ ಭಾರತದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡುವ ವಿಶ್ವಾಸವಿದೆ : ಟ್ರೆಂಟ್ ಬೌಲ್ಟ್