ಹ್ಯಾಂಗ್‌ಝೌ (ಚೀನಾ): ಇಲ್ಲಿನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಏಷ್ಯನ್ ಗೇಮ್ಸ್ 2023ರ ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯ ಗೆಲ್ಲುವ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಲಿದೆ. ಸೋತ ತಂಡ ಬೆಳ್ಳಿಗೆ ತೃಪ್ತಿಪಡಬೇಕಿದೆ. ಭಾರತ ತಂಡವನ್ನು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶ ಪ್ರವಾಸದ ವೇಳೆ ನಡೆದ ವಿವಾದದಿಂದಾಗಿ 2 ಪಂದ್ಯಗಳಿಂದ ಹರ್ಮನ್ ಪ್ರೀತ್ ಕೌರ್ ನಿಷೇಧಕ್ಕೊಳಗಾಗಿದ್ದರು. ಇದೀಗ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ, ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್ ತಲುಪಿದೆ. ಇನ್ನೊಂದೆಡೆ, ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ಕ್ರಿಕೆಟ್ ಮೂರನೇ ಬಾರಿಗೆ ಏಷ್ಯನ್ ಗೇಮ್ಸ್‌ನ ಭಾಗವಾಗಿದೆ. 2010 ಮತ್ತು 2014ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. ಈ ಬಾರಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕ್ ತಂಡವನ್ನು ಬಾಂಗ್ಲಾ ಸೋಲಿಸಿತು.
ಭಾರತ 11ರ ಬಳಗ: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮಂಜೋತ್ ಕೌರ್, ಪೂಜಾ ವಸ್ತ್ರಾಕರ್, ಟಿಟಾಸ್ ಸಾಧು, ರಾಜೇಶ್ವರಿ ಗಾಯಕ್‌ವಾಡ್.
ಶ್ರೀಲಂಕಾ 11ರ ಬಳಗ: ಚಮರಿ ಅಟಪಟ್ಟು (ನಾಯಕಿ), ಅನುಷ್ಕಾ ಸಂಜೀವಿನಿ (ವಿಕೆಟ್ ಕೀಪರ್), ವಿಷಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಹಾಸಿನಿ ಪೆರೇರಾ, ಉದೇಶಿಕಾ ಪ್ರಬೋಧಿನಿ, ಓಷದಿ ರಣಸಿಂಗ್, ಇನೋಕಾ ರಣವೀರ, ಇನೋಶಿ ಪ್ರಿಯದರ್ಶಿನಿ, ಕವಿಶಾ ದಿಲ್ಹಾರಿ, ಸುಗಂಧಿಕಾ ಕುಮಾರಿ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಶೂಟಿಂಗ್, ರೋಯಿಂಗ್‌ನಲ್ಲಿ ಭಾರತದ ಸ್ಪರ್ಧಿಗಳಿಗೆ ಕಂಚು; 9ಕ್ಕೇರಿದ ಪದಕ ಸಂಖ್ಯೆ
ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಿಂಚು: ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 51 ರನ್ಗೆ ಕಟ್ಟಿಹಾಕಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ವನಿತೆಯರ ಪ್ರಬಲ ಬೌಲಿಂಗ್ ದಾಳಿ ಕಾಡಿತು. ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಎಲ್ಲರೂ ಒಂದೊಂದು ವಿಕೆಟ್ ಹಂಚಿಕೊಂಡರು. ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ 12 ರನ್ ಗಳಿಸಿದ್ದೇ ಅವರ ತಂಡದ ಬೃಹತ್ ಮೊತ್ತ. ನಹಿದಾ ಅಕ್ತರ್ 9, ಸೋಭಾನಾ ಮೊಸ್ತರಿ ಮತ್ತು ರಿತು ಮೋನಿ ತಲಾ 8 ರನ್ ಗಳಿಸಿದರು. ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. 52 ರನ್ ಸಂಕ್ಷಿಪ್ತ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು. ನಾಯಕಿ ಮಂದಾನ 7 ರನ್ ಔಟ್ ಆದರೆ, ಶೆಫಾಲಿ ವರ್ಮಾ 17 ರನ್ಗೆ ವಿಕೆಟ್ ಕೊಟ್ಟರು. ಜೆಮಿಕಾ ರೋಡ್ರಿಗಸ್ ಅಜೇಯ 20 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. 8.2 ಓವರ್ನಲ್ಲಿ 8 ವಿಕೆಟ್ ಉಳಿಸಿಕೊಂಡು ಭಾರತದ ತಂಡ 52 ರನ್ ಗಳಿಸಿ ಫೈನಲ್ಗೆ ಲಗ್ಗೆಯಿಟ್ಟಿತ್ತು.
ಫೈನಲ್‌ನಲ್ಲಿ ಭಾರತ -ಲಂಕಾ ಮುಖಾಮುಖಿ: ಚಿನ್ನದ ಪದಕಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಫೈನಲ್ ಹಣಾಹಣಿ ನಡೆಯುತ್ತಿದೆ. ಏಷ್ಯನ್ ರಾಷ್ಟ್ರಗಳಲ್ಲಿ ಭಾರತದ ವನಿತೆಯರ ತಂಡ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಟಿ20 ಮಾದರಿಯಲ್ಲಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಕಾ ರೋಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಉತ್ತಮ ಪ್ರದರ್ಶನ ನೀಡಿದ ದಾಖಲೆಗಳಿವೆ. ಹೀಗಾಗಿ ಭಾರತಕ್ಕೆ ಇಂದು ಚಿನ್ನ ಒಲಿಯುವ ಅವಕಾಶ ಇದೆ.