ಹಾಂಗ್‌ಝೌ (ಚೀನಾ): ಏಷ್ಯನ್ ಕ್ರೀಡಾಕೂಟದ ಟಿ-20 ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಅಪ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಲಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ಗೆ ಇಳಿದ ಆಫ್ಘನ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೀಡಾಯಿತು.
ಆರಂಭಿಕ ಜುಬೈದ್ ಅಕ್ಬರಿ 5 ರನ್ ಗಳಿಸಿದ್ದಾಗ ಶಿವಂ ದುಬೆ ಎಸೆತದಲ್ಲಿ ವಿಕೆಟ್ ಕೊಟ್ಟರು. ಬಳಿಕ ಮೊಹಮ್ಮದ ಶಹಜಾದ್ ಕೂಡ 4 ರನ್ ಗಳಿಸಿ ಅರ್ಶದೀಪ್ ಸಿಂಗ್ ಎಸೆತದಲ್ಲಿ ಔಟಾದರು. ನೂರ್ ಅಲಿ ಜಡ್ರಾನ್ 1 ರನ್ ಗಳಿಸಿ ರನೌಟ್ ಆದರು. ಈ ವೇಳ ಆಫ್ಘನ್ ತಂಡದ ಮೊತ್ತ 12 ಆಗುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟರ್ಗಳು ಪೆವಿಲಿಯನ್ ಸೇರಿದರು. ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದಾಗ ಕ್ರೀಸ್ಗೆ ಬಂದ ಶಾಹಿದುಲ್ಹಾ ಗಟ್ಟಿಯಾಗಿ ನಿಂತು ತಂಡದ ಮೊತ್ತ ಏರಿಸಿದರು. ಇನ್ನೊಂದೆಡೆ ಅಫ್ಸರ್ ಝಝೈ 15 ಮತ್ತು ಕರೀಂ ಜನತ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
18.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಆಫ್ಘನ್ 122 ರನ್ ಕಲೆ ಹಾಕಿದೆ. ಶಾಹಿದುಲ್ಹಾ 49 ಮತ್ತು ಗುಲ್ಬದಿನ್ 27 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸದ್ಯ ಮಳೆಯಿಂದ ಪಂದ್ಯ ಸ್ಥಗಿತಗೊಂಡಿದೆ. ಒಂದು ವೇಳೆ ಪಂದ್ಯ ರದ್ದಾದರೆ ರ‍್ಯಾಂಕ್ ಆಧಾರದ ಮೇಲೆ ಭಾರತಕ್ಕೆ ಚಿನ್ನದ ಪದಕ ಸಿಗಲಿದೆ. ಕರಾರುವಕ್ಕಾಗಿ ಬೌಲಿಂಗ್ ಮಾಡಿದ ಭಾರತದ ಬೌಲರ್ಗಳು, ಆಫ್ಘನ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಅರ್ಶದೀಪ್ ಸಿಂಗ್, ಶಿವಂ ದುಬೆ, ಶಹಬಾಜ್ ಅಹಮದ್, ರವಿ ಬಿಷ್ನೋಯ್ ತಲಾ 1 ವಿಕೆಟ್ ಕಬಳಿಸಿದರು.
ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ತಂಡವನ್ನು ಸೋಲಿಸಿ ರುತುರಾಜ್ ಗಾಯಕ್ವಾಡ್ ತಂಡ ಫೈನಲ್ಗೆ ಲಗ್ಗೆ ಇಟ್ಟಿತು. ಇನ್ನೊಂದೆಡೆ ಪಾಕ್ ತಂಡವನ್ನು ಬಗ್ಗುಬಡಿದು ಅಫ್ಘಾನಿಸ್ತಾನ ಪ್ರಶಸ್ತಿ ಹಂತಕ್ಕೆ ಬಂದಿದೆ.
ಸೆಮಿಫೈನಲ್ನಲ್ಲಿ ಬಾಂಗ್ಲಾವನ್ನು ಕೇವಲ 96 ರನ್ಗಳಿಗೆ ಟೀಂ ಇಂಡಿಯಾ ಕಟ್ಟಿ ಹಾಕಿ, ಅನಾಯಾಸವಾಗಿ ಜಯ ದಾಖಲಿಸಿತ್ತು.
ಭಾರತ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಅರ್ಶದೀಪ್ ಸಿಂಗ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್, ರವಿ ಬಿಷ್ಟೋಯ್, ಶಹಬಾಜ್ ಅಹಮದ್, ಜಿತೇಶ್ ಶರ್ಮಾ, ರಿಂಕು ಸಿಂಗ್, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಆರ್ ಸಾಯಿ ಕಿಶೋರ್.
ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕಗಳ ಶತಕದ ಸಾಧನೆ... ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡಕ್ಕೆ ಚಿನ್ನದ ಗರಿ..