ನವದೆಹಲಿ: ಮುಂಬರುವ ಪ್ರತಿಷ್ಠಿತ ಏಷ್ಯಾಕಪ್ ಟಿ-20 ಸರಣಿಗೆ ಟೀಂ ಇಂಡಿಯಾ ಪ್ರಕಟಿಸುವುದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೆಲ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು ಹಿರಿಯ ಆಟಗಾರರನ್ನು ಕೈಬಿಟ್ಟು ಅವರಿಗೆ ಮಣೆ ಹಾಕುವುದು ಅಷ್ಟೊಂದು ಸುಲಭದ ಮಾತಲ್ಲ.
ವಿಂಡೀಸ್ ವಿರುದ್ಧದ ಟಿ20 ಸರಣಿ ಭಾನುವಾರ ಮುಕ್ತಾಯಗೊಳ್ಳಲಿದೆ. ತದನಂತರ ಆಯ್ಕೆ ಸಮಿತಿ 2022ರ ಏಷ್ಯಾಕಪ್‌ಗೆ ಟೀಂ ಇಂಡಿಯಾ ಪ್ರಕಟಿಸುವ ಸಾಧ್ಯತೆ ಇದೆ. ಈ ತಂಡ ಬಹುತೇಕವಾಗಿ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಭಾಗಿಯಾಗಲಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವಿಭಾಗದ ಪ್ರಮುಖ ಪ್ಲೇಯರ್ಸ್ ಆಗಿದ್ದು, ಏಷ್ಯಾಕಪ್ ವೇಳೆಗೆ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಂಡದಲ್ಲಿ ಆಲ್ರೌಂಡ್ ಪ್ಲೇಯರ್ಸ್ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಯಜುವೇಂದ್ರ ಚಹಲ್, ಆರ್.ಅಶ್ವಿನ್, ಬುಮ್ರಾ ಮತ್ತು ಭುವಿ ತಂಡದ ಬೌಲಿಂಗ್ ಆಧಾರಸ್ತಂಭಗಳು. ಗಾಯದಿಂದ ಚೇತರಿಸಿಕೊಂಡ ಹರ್ಷಲ್ ಪಟೇಲ್ ಫಿಟ್ ಆಗಿದ್ರೆ, ತಂಡದಲ್ಲಿ ಸ್ಥಾನ ಪಡೆದುಕೊಳ್ಳುವರು. ಆದರೆ, ದೀಪಕ್ ಹೂಡಾ, ಇಶಾನ್ ಕಿಶನ್, ಶುಬ್ಮಲ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆ ಮೇಲೆ ತೂಗುಗತ್ತಿ ಇದೆ.
ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ, ಹಿರಿಯರನ್ನು ಕೈಬಿಟ್ಟು ಅವರಿಗೆ ಚಾನ್ಸ್ ನೀಡುವ ಸಾಧ್ಯತೆ ತೀರಾ ವಿರಳ. ಜಿಂಬಾಬ್ವೆ ವಿರುದ್ಧದ ಸರಣಿಗೋಸ್ಕರ ದೀಪಕ್ ಚಹರ್ ಕಮ್ಬ್ಯಾಕ್ ಮಾಡಿದ್ದರಿಂದ ಅವರಿಗೂ ಟಿ20 ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಉಳಿದಂತೆ ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್ ಸ್ಪಿನ್ ವಿಭಾಗದ ಸ್ಪರ್ಧಿಗಳಾಗಿದ್ದು, ಯಾರಿಗೆ ಚಾನ್ಸ್ ಸಿಗಲಿದೆ ಎಂಬುದು ಈಗಿನ ಕುತೂಹಲ.
ಸಂಭವನೀಯ ತಂಡ: ರೋಹಿತ್ ಶರ್ಮಾ(ಕ್ಯಾಪ್ಟನ್), ಕೆ.ಎಲ್.ರಾಹುಲ್(ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿ.ಕೀ),ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್
ಬ್ಯಾಕ್ಅಪ್ ಬ್ಯಾಟರ್: ದೀಪಕ್ ಹೂಡಾ/ಇಶಾನ್ ಕಿಶನ್/ಸಂಜು ಸ್ಯಾಮ್ಸನ್
ಬ್ಯಾಕ್ಅಪ್ ಬೌಲರ್: ಅರ್ಷದೀಪ್ ಸಿಂಗ್/ಆವೇಶ್ ಖಾನ್/ದೀಪಕ್ ಚಹರ್/ಹರ್ಷಲ್ ಪಟೇಲ್
ಬ್ಯಾಕ್ಅಪ್ ಸ್ಪಿನ್ನರ್ಸ್: ಅಕ್ಸರ್ ಪಟೇಲ್/ಕುಲ್ದೀಪ್ ಯಾದವ್/ರವಿ ಬಿಷ್ಣೋಯ್