ಶಾರ್ಜಾ(ಯುಎಇ): ಏಷ್ಯಾ ಕಪ್ನ ಸೂಪರ್ 4 ಹಂತದ ಮತ್ತೊಂದು ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ತಂಡ ಹರಸಾಹಸ ಪಟ್ಟು 9 ವಿಕೆಟ್ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಮಹತ್ವದ ಟೂರ್ನಿಯ ಪ್ರಶಸ್ತಿ ರೇಸ್ನಿಂದ ಟೀಂ ಇಂಡಿಯಾ ಅಧಿಕೃತವಾಗಿ ಹೊರಬಿದ್ದಿದೆ. ಸೆಪ್ಟೆಂಬರ್ 11ರಂದು ನಡೆಯುವ ಫೈನಲ್ನಲ್ಲಿ ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿದ್ದು ಇತರೆ ತಂಡಗಳ ಫಲಿತಾಂಶದ ಮೇಲೆ ಭವಿಷ್ಯ ನಿರ್ಧಾರವಾಗಬೇಕಾಗಿತ್ತು. ಹೀಗಾಗಿ, ನಿನ್ನೆಯ ಪಾಕ್-ಆಫ್ಘನ್ ಪಂದ್ಯ ಮಹತ್ವ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ 1 ವಿಕೆಟ್ ಅಂತರದಿಂದ ಗೆಲುವಿನ ನಗೆ ಬೀರಿದ ಪಾಕ್ ಫೈನಲ್ಗೆ ಲಗ್ಗೆ ಹಾಕಿತು. ಇದರೊಂದಿಗೆ ಅಫ್ಘಾನಿಸ್ತಾನ ಹಾಗೂ ಭಾರತ ತಂಡಗಳು ಏಷ್ಯಾ ಕಪ್ನಿಂದ ಅಧಿಕೃತವಾಗಿ ಹೊರಬಿದ್ದಿವೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಎದುರಾಳಿ ಬೌಲರ್ಗಳ ದಾಳಿಗೆ ತತ್ತರಿಸಿ ಕೇವಲ 129 ರನ್ಗಳಿಸಿತು. ತಂಡದ ಪರ ಇಬ್ರಾಹಿಂ ಜಾರ್ಡನ್ (35) ವೈಯಕ್ತಿಕ ಗರಿಷ್ಠ ರನ್ಗಳಿಸಿದರು. ಉಳಿದಂತೆ, ಹಜರತ್ಉಲ್ಲಾ(21ರನ್), ಗುರ್ಬಾಜ್ (17ರನ್) ಗಳಿಸಿದರು. ಪಾಕ್ ಪರ ಹ್ಯಾರಿಸ್ ರೌಫ್ 2 ವಿಕೆಟ್, ನಸೀಮ್ ಶಾ, ಮೊಹಮ್ಮದ್, ನವಾಜ್ ಹಾಗೂ ಶಹ್ಬಾದ್ ಖಾನ್ ತಲಾ 1 ವಿಕೆಟ್ ಪಡೆದರು.
130 ರನ್ಗಳ ಗುರಿ ಬೆನ್ನತ್ತಿದ ಪಾಕ್ ತಂಡಕ್ಕೆ ಅಫ್ಘನ್ ಬೌಲರ್ಗಳು ವಿಲನ್ಗಳ ರೀತಿ ಕಾಡಿದರು. ಆರಂಭದಲ್ಲೇ ತಂಡಕ್ಕೆ ಆಘಾತ ನೀಡಿ ಮೇಲುಗೈ ಸಾಧಿಸಿದರು. ಕ್ಯಾಪ್ಟನ್ ಬಾಬರ್ ಆಜಂ(0), ಫಖಾರ್ ಜಮಾನ್(5)ರನ್ಗಳಿಸಿ ಪೆವಿಲಿಯನ್ ಸೇರಿದರು. ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋದ ಮೊಹಮ್ಮದ್ ರಿಜ್ವಾನ್(20) ಕೂಡಾ ರಾಶೀದ್ ಖಾನ್ ಓವರ್ನಲ್ಲಿ ಔಟಾದರು.
ಇದನ್ನೂ ಓದಿ: Asia Cup ಕ್ರಿಕೆಟ್ ಲೆಕ್ಕಾಚಾರ: ಹೀಗಾದ್ರೆ ಮಾತ್ರ ಟೀಂ ಇಂಡಿಯಾ ಫೈನಲ್ಗೆ ಲಗ್ಗೆ ಹಾಕಬಹುದು!
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಹ್ಮದ್(30) ಹಾಗೂ ಶಾಬ್ದಾದ್ ಖಾನ್(36) ತಂಡಕ್ಕೆ ಸುಲಭ ಗೆಲುವು ತಂದುಕೊಡುವ ಮುನ್ಸೂಚನೆ ನೀಡಿದರು. ಆದರೆ, ಇವರ ವಿಕೆಟ್‌ಗಳನ್ನು ರಾಶೀದ್ ಖಾನ್ ಮತ್ತು ಫಾರಿದ್ ಅಹ್ಮದ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಪಾಕ್ ಪೆವಿಲಿಯನ್ ಪರೇಡ್ ಶುರುವಾಗಿತ್ತು. ಆದರೆ, ಕೊನೆಯ ಓವರ್ನಲ್ಲಿ ಪಾಕ್ ಗೆಲುವಿಗೆ 11 ರನ್ಗಳು ಬೇಕಿತ್ತು. ಈ ಸಂದರ್ಭದಲ್ಲಿ ಒಂದು ವಿಕೆಟ್ ಮಾತ್ರ ಉಳಿದಿತ್ತು. ಫಾರೂಖಿ ಬೌಲ್ ಮಾಡಿದ ಕೊನೆಯ ಓವರ್ನ ಮೊದಲೆರೆಡು ಎಸೆತಗಳನ್ನು ಸಿಕ್ಸರ್ಗಟ್ಟಿದ ನಸೀಂ ಶಾ ಪಾಕ್ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು
ಏಷ್ಯಾ ಕಪ್ನಲ್ಲಿ ಅತಿ ಹೆಚ್ಚು ಅಂದರೆ, 7 ಸಲ ಪ್ರಶಸ್ತಿ ಗೆದ್ದ ಹಾಲಿ ಚಾಂಪಿಯನ್ ಭಾರತ ಸೂಪರ್ ಫೋರ್ ಹಂತದಲ್ಲೇ ಸತತ ಎರಡು ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಇಂದಿನ ಅನಧಿಕೃತ ಪಂದ್ಯದಲ್ಲಿ ಅಫ್ಘಾನಿಸ್ತಾನ ಸವಾಲು ಎದುರಿಸಬೇಕಿದೆ.