ದುಬೈ(ಯುಎಇ): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಸಂಜೆ ಟೀಂ ಇಂಡಿಯಾ ತನ್ನ 2ನೇ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ಗೆದ್ದು ನೇರವಾಗಿ ಸೂಪರ್ ಫೋರ್‌ಗೆ ಲಗ್ಗೆ ಇಡಲು ರೋಹಿತ್ ಶರ್ಮಾ ಬಳಗ ತವಕಿಸುತ್ತಿದೆ.
ಹಾಂಗ್ ಕಾಂಗ್ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲೇ ಬಲಿಷ್ಠ ಭಾರತವನ್ನು ಎದುರಿಸುತ್ತಿದೆ. ಇನ್ನೊಂದೆಡೆ, ಸಾಂಪ್ರದಾಯಿಕ ಬದ್ಧ ಎದುರಾಳಿ ತಂಡವಾದ ಪಾಕಿಸ್ತಾನವನ್ನು ರೋಚಕ ಕಾದಾಟದಲ್ಲಿ ಮಣಿಸಿದ ಟೀಂ ಇಂಡಿಯಾ ಈ ಪಂದ್ಯವನ್ನು ನಿರಾಯಾಸವಾಗಿ ಕೈವಶ ಮಾಡಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಹಾಟ್ ಫೇವರೇಟ್ ಟೀಂ.
ಹಾಗಂತ, ಟೀಂ ಇಂಡಿಯಾ ಹಾಂಗ್‌ಕಾಂಗ್ ಅನ್ನು ಸರಳವಾಗಿ ಪರಿಗಣಿಸುವಂತಿಲ್ಲ. ಕಳೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಈ ತಂಡದ ವಿರುದ್ಧ ಗೆದ್ದಿದ್ದು ಕೇವಲ 26 ರನ್‌ಗಳ ಅಂತರದಿಂದ ಅನ್ನೋದಿಲ್ಲಿ ಗಮನಾರ್ಹ.
ಈ ಸಲದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಗೆದ್ದರೂ ಅಲ್ಲಿ ಟೀಂ ಇಂಡಿಯಾ ಸಾಮರ್ಥ್ಯದ ಪರೀಕ್ಷೆಯೂ ನಡೆದಿದೆ. ಏಕೆಂದರೆ, ಟಾಪ್ ಆರ್ಡರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ಬ್ಯಾಟ್‌ನಿಂದ ಹೇಳಿಕೊಳ್ಳುವ ಪ್ರದರ್ಶನ ಕಂಡುಬರಲಿಲ್ಲ. ಹಾಗಾಗಿ, ಇಂದಿನ ಪಂದ್ಯದಲ್ಲಿ ಈ ಆಟಗಾರರು ಚೇತರಿಸಿಕೊಂಡು ಮರಳಿ ಫಾರ್ಮ್ ಕಂಡುಕೊಳ್ಳಲು ಸೂಕ್ತ ವೇದಿಕೆಯೂ ಆಗಲಿದೆ.
ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರಿಂದ ಕೂಡಿದ ತಂಡದ ಮಧ್ಯಮ ಕ್ರಮಾಂಕ ಸದ್ಯಕ್ಕೆ ಬಲಿಷ್ಠ. ಆದ್ರೆ ಆಟಗಾರರು ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಅದ್ರಲ್ಲೂ ಟಾಪ್ ಆರ್ಡರ್ ಬ್ಯಾಟರ್‌ಗಳಲ್ಲಿ ಗುರುತರ ಪ್ರದರ್ಶನ ಬರದೇ ಇದ್ದಾಗ ಮಧ್ಯಮ ಕ್ರಮಾಂಕದ ಹೊಣೆ ಹೆಚ್ಚಿರುತ್ತದೆ. ಹಾಗಾಗಿ, ಮುಂದೆಯೂ ಪಾಂಡ್ಯ, ಸೂರ್ಯಕುಮಾರ್ ಯಾದವ್ ಹಾಗು ರವೀಂದ್ರ ಜಡೇಜಾ ಮೇಲೆ ಹೆಚ್ಚು ಗಮನ ಕೇಂದ್ರೀಕೃತವಾಗಲಿದೆ.
ಬೌಲಿಂಗ್ ವಿಚಾರಕ್ಕೆ ಬರೋಣ. ಏಷ್ಯಾ ಕಪ್ ಅಭಿಯಾನದ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತೀಯ ಬೌಲರ್‌ಗಳು ಸರ್ವಶ್ರೇಷ್ಠ ಪ್ರದರ್ಶನವನ್ನೇ ನೀಡಿದ್ದಾರೆ. ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್ ಹಾಗು ಅವೇಶ್ ಖಾನ್ ಅವರನ್ನೊಳಗೊಂಡ ವೇಗಿಗಳೇ ಪಡೆದುಕೊಂಡಿದ್ದಾರೆ ಅನ್ನೋದು ಗಮನಾರ್ಹ.
ಮುಂದಿನ ಪಂದ್ಯಗಳಲ್ಲೂ ಈ ಬೆಳವಣಿಗೆ ಮುಂದುವರೆದರೆ ತಂಡ ಅತ್ಯುತ್ತಮ ಲಯದಲ್ಲಿರಲು ಸಾಧ್ಯವಿದೆ. ಆದ್ರೆ, ಒಂದು ವೇಳೆ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಕಂಡುಬರದೇ ಇದ್ದಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್, ರವಿ ಬಿಷ್ಣೋಯ್ ಮತ್ತು ಆರ್ ಅಶ್ವಿನ್ ತಂಡದ ನೆರವಿಗೆ ಬರಬೇಕಿದೆ. ಅಷ್ಟೇ ಅಲ್ಲ , ನಿರ್ಣಾಯಕ ಘಟ್ಟದಲ್ಲಿ ವಿಕೆಟ್ ಕಬಳಿಸಿ ತಂಡಕ್ಕೆ ಮುನ್ನಡೆ ತಂದುಕೊಂಡುವ ಪ್ರಮುಖ ಜವಾಬ್ದಾರಿ ಹೊಂದಿದ್ದಾರೆ.
ಹಾಂಗ್ ಕಾಂಗ್ ತಂಡ ಹೇಗಿದೆ?: ಏಷ್ಯಾ ಕಪ್ ಕ್ವಾಲಿಫೈಯರ್ ನಲ್ಲಿ ಅದ್ಭುತ ಪ್ರದರ್ಶನ ಕೊಟ್ಟರೂ ಹಾಂಗ್ ಕಾಂಗ್ ತಂಡ ಹೆಚ್ಚು ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಇದೆ. ಏಕೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತವನ್ನು ಅವರು ಹೆಚ್ಚು ಎದುರಿಸಿಲ್ಲ. ಕಳೆದ 2018 ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಎದುರಿಸಿದ ಬಗೆಗಿಂತಲೂ ಈಗಿನ ಸವಾಲು ಹೆಚ್ಚಿನದ್ದು. ತಂಡ ಎಲ್ಲ ವಿಭಾಗಗಳಲ್ಲೂ ಹೆಚ್ಚು ಬಲಾಢ್ಯವಾಗಿದೆ.
ತಂಡದ ನಾಯಕ ನಿಜಖಾತ್ ಖಾನ್, ಬಾಬರ್ ಹಯಾತ್ ಮತ್ತು ಕಿಂಚಿತ್ ದೇವಾಂಗ್ ಶಾ ಬ್ಯಾಟ್‌ಗಳಿಂದ ಹೆಚ್ಚು ರನ್ ಹರಿದುಬಂದರೆ ಮಾತ್ರ ತಂಡ ಉತ್ತಮ ಸ್ಥಿತಿಯಲ್ಲಿರಲಿದೆ.
ಪಂದ್ಯ ಎಲ್ಲಿ?: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ
ಎಷ್ಟು ಹೊತ್ತಿಗೆ?: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)