ದುಬೈ(ಯುಎಇ): ಏಷ್ಯಾ ಕಪ್ ಟಿ-20 ಕ್ರಿಕೆಟ್ ಟೂರ್ನಿಯ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ 192 ರನ್ಗಳನ್ನು ಪೇರಿಸಿದೆ. ಎದುರಾಳಿ ತಂಡದ ಗೆಲುವಿಗೆ 193 ರನ್ಗಳ ಟಾರ್ಗೆಟ್ ನೀಡಲಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ಹಾಂಗ್ ಕಾಂಗ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾದ ಆಟಗಾರರು ಅಬ್ಬರಿಸುವ ವಿಶ್ವಾಸವಿತ್ತು. ಆದರೆ, 5 ಓವರ್ಗಳು ಆಗುವಷ್ಟರಲ್ಲೇ ನಾಯಕ ರೋಹಿತ್ ಶರ್ಮಾ (21 ರನ್) ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು 13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದ ರೋಹಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವ ಸೂಚನೆ ನೀಡಿದ್ದರು. ಆದರೆ, ಆಯುಷ್ ಶುಕ್ಲಾ ಬೌಲಿಂಗ್ನಲ್ಲಿ ಅಜಾಜ್ ಖಾನ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಆಗ ಭಾರತ ತಂಡದ ಮೊತ್ತ ಕೇವಲ 38 ರನ್ಗಳು ಆಗಿತ್ತು.
ರೋಹಿತ್ ನಂತರ ವಿರಾಟ್ ಜೊತೆಗೂಡಿದ ಕೆ ಎಲ್ ರಾಹುಲ್ ನಿಧಾನಗತಿ ಬ್ಯಾಟಿಂಗ್ ನಡೆಸಿದರು. 39 ಎಸೆತಗಳನ್ನು ಎದುರಿಸಿದ ರಾಹುಲ್ ಕೇವಲ ಎರಡು ಬೌಂಡರಿಗಳೊಂದಿಗೆ 36 ರನ್ಗಳನ್ನು ಮಾತ್ರವೇ ಸಿಡಿಸಿ ಔಟಾದರು. ಇತ್ತ, ವಿರಾಟ್ ಕೊಹ್ಲಿ ಹಲವು ದಿನಗಳ ಬಳಿಕ ಕ್ರೀಸ್ ಕಚ್ಚಿ ನಿಂತರು. ಅಲ್ಲದೇ, ಅರ್ಧಶತಕ ಸಿಡಿಸಿ ಮಿಂಚಿದರು. ಕೊಹ್ಲಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು.
44 ಎಸೆತಗಳಲ್ಲಿ ವಿರಾಟ್ ಮೂರು ಸಿಕ್ಸರ್ಗಳು ಹಾಗೂ ಒಂದು ಬೌಂಡರಿಯೊಂದಿಗೆ 59 ರನ್ ಬಾರಿಸಿ ಅಜೇಯರಾಗುಳಿದರು. ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 26 ಎಸೆತಗಳಲ್ಲೇ ತಲಾ 6 ಸಿಕ್ಸರ್ಗಳು ಹಾಗೂ ಬೌಂಡರಿಗಳೊಂದಿಗೆ 68 ರನ್ ಕಲೆ ಹಾಕಿದರು. ಈ ಮೂಲಕ ಟೀಂ ಇಂಡಿಯಾ 192 ರನ್ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
ಹಾಂಗ್ ಕಾಂಗ್ ಪರವಾಗಿ ಆಯುಷ್ ಶುಕ್ಲಾ ಹಾಗೂ ಮುಹಮ್ಮದ್ ಜಹಾಫರ್ ಮಾತ್ರವೇ ತಲಾ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರು. ಉಳಿದಂತೆ ಹರೂನ್ ಅರ್ಷದ್, ಅಜಾಜ್ ಖಾನ್ ಸೇರಿ ಎಲ್ಲ ಬೌಲರ್ಗಳನ್ನು ಟೀಂ ಇಂಡಿಯಾ ಆಟಗಾರರು ಬೆಂಡೆತ್ತಿದರು.